ರಾಜಕಾರಣದಲ್ಲಿ 24 ತಾಸು ಸಕ್ರಿಯನಾಗಿರುವೆ ಚುನಾವಣೆ ಎದುರಿಸಲು ಸದಾ ಸಿದ್ಧ: ಎಸ್ಸೆಸ್ಸೆಂ

ರಾಜಕಾರಣದಲ್ಲಿ 24 ತಾಸು ಸಕ್ರಿಯನಾಗಿರುವೆ ಚುನಾವಣೆ ಎದುರಿಸಲು ಸದಾ ಸಿದ್ಧ: ಎಸ್ಸೆಸ್ಸೆಂ - Janathavaniದಾವಣಗೆರೆ, ಸೆ.21- ರಾಜಕಾರಣದಿಂದ ಇಂದಿಗೂ ನಾನು ಹಿಂದೆ ಸರಿದಿಲ್ಲ. 24 ತಾಸು ಸಕ್ರಿಯವಾಗಿದ್ದೇನೆ ಎಂದು ಹೇಳುವ ಮುಖೇನ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಿರುವ ಸುಳಿವನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೊರಹಾಕಿದರು.

ಅವರು, ಇಂದು ಸಂಜೆ ನಗರದ ಕಲ್ಲೇಶ್ವರ ಮಿಲ್‍ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಜನಾಶೀರ್ವಾದ ಬಯಸುತ್ತಾ, ಚುನಾವಣೆ ಎದುರಿಸಲು ಈಗಲೂ ತಯಾರಾಗಿದ್ದೇನೆ. 24 ತಾಸು ಸಕ್ರಿಯವಾಗಿರುವೆ ಎಂದು ತಿಳಿಸಿದರು.

ಪಕ್ಷದ ಬಳಿ ಹಣವಿತ್ತು ಖರ್ಚು ಮಾಡಿದರಷ್ಟೆ: ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಡವರು, ರೈತರ ಪರವಾಗಿ ಒಳಿತುಂಟು ಮಾಡುವ ಮಹತ್ವದ ಉತ್ತಮ ನಿರ್ಣಯಗಳನ್ನೇನಾದರೂ ಕೈಗೊಂಡಿದ್ದಾರೆಯೇ, ಇಲ್ಲವಲ್ಲ. ಆ ಪಕ್ಷದ ಬಳಿ ಹಣವಿತ್ತು. ಅದನ್ನು ಖರ್ಚು ಮಾಡಿದ್ದಾರೆ. ಸರ್ಕಾರದ ಮಂತ್ರಿಗಳು, ಶಾಸಕರು ನಗರದಲ್ಲಿ ಎರಡು ದಿನಗಳ ಕಾಲ ಇದ್ದು ಕಾರ್ಯಕಾರಿಣಿ ಸಭೆ ನಡೆಸಿದರು, ಮುಗಿಸಿಕೊಂಡು ಹೋದರು ಅಷ್ಟೇ ಎಂದು ವ್ಯಂಗ್ಯವಾಡಿದರು.

ಬಿಎಸ್ ವೈ ಕೊನೆ ಮಾತು ಸತ್ಯ: ರಾಜ್ಯದಲ್ಲಿ ಬಿಜೆಪಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಬಂದಿಲ್ಲ, ಮೋದಿ ಅವರ ಅಲೆಯಿಂದ ಬಂದಿದ್ದು, ವಿಧಾನ ಸಭೆ ಚುನಾವಣೆಯಲ್ಲಿ ಇದು ಸಹಾಯಕ್ಕೆ ಬರುವುದಿಲ್ಲ ಎಂಬುದಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಆಡಿದ ಕೊನೆಯ ಮಾತು ಒಪ್ಪುವಂತಹುದ್ದು. ಅದು ಅಕ್ಷರ ಸಹ ಸತ್ಯ ಎಂದು ಹೇಳಿದರು.

ಪಕ್ಷಕ್ಕೆ ಬರುವವರೆಲ್ಲಾ ನಮ್ಮವರೇ: ಕಾಂಗ್ರೆಸ್ ಪಕ್ಷಕ್ಕೆ ಅನ್ಯ ಪಕ್ಷದವರು ಸೇರ್ಪಡೆಗೊಳ್ಳುತ್ತಿರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಬರುವ ಅನ್ಯ ಪಕ್ಷದವರೆಲ್ಲರೂ ನಮ್ಮವರೇ. ಬರುವವರಿಗೆ ಬೇಡವೆನ್ನದೇ ಸ್ವಾಗತಿಸುತ್ತೇವೆ ಎಂದರು.

ಪರ್ಸೆಂಟ್ ಬಿಟ್ಟು ಕೆಲಸ ಮಾಡಲಿ: ಗಾಜಿನ ಮನೆಯಲ್ಲಿ ಕಾರಂಜಿ ನಿರ್ಮಾಣಕ್ಕೆ ಹಿಂದೆ ನಮ್ಮ ಅವಧಿಯಲ್ಲಿ ಮಂಜೂರಾಗಿತ್ತು. ಈಗ ಅದನ್ನು ಬಿಜೆಪಿಯವರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದನ್ನು 15-20 ಪರ್ಸೆಂಟ್ ನಂತೆ ಕಮೀಷನ್ ಲೆಕ್ಕಚಾರದಲ್ಲಿ ಮಾಡುವಂತಾಗಬಾರದು. ಸರಿಯಾದ ರೀತಿಯಲ್ಲಿ ನಿರ್ಮಿಸಿ ಸಮರ್ಪಣೆ ಮಾಡಲಿ. ಸುಸಜ್ಜಿತ, ಸುಂದರ ಕಾರಂಜಿ ನಿರ್ಮಿಸಲು ದುಬೈನಲ್ಲಿ ಕಾರಂಜಿ ಪ್ರೇರಣೆಯಾಗಲಿ. ಅದಕ್ಕೆ ದುಬೈಗೆ ಹೋಗಿ ನೋಡಿಕೊಂಡು ಬಂದು ನಿರ್ಮಾಣ ಮಾಡಲಿ ಎಂದು ಕಿವಿಮಾತು ಹೇಳಿದರು.

error: Content is protected !!