ಮೋದಿ ಹೆಸರಿನಿಂದ ಗೆಲ್ಲುವ ಭ್ರಮೆ ಬೇಡ: ಯಡಿಯೂರಪ್ಪ

ಮೋದಿ ಹಾಡಿ ಹೊಗಳಿದ ಅರುಣ್ ಸಿಂಗ್

ದಾವಣಗೆರೆ, ಸೆ. 19 – ಕೊರೊನಾ ಸಂದರ್ಭ ದಲ್ಲಿ ಲಸಿಕೆ ನೀಡಿರುವುದು, ಆಕ್ಸಿಜನ್ ವ್ಯವಸ್ಥೆ ಮಾಡಿರುವುದು, ಒ.ಬಿ.ಸಿ. ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನ ನೀಡುವುದು ಹಾಗೂ ಹೆಚ್ಚು ಒಬಿಸಿ ವರ್ಗದವರಿಗೆ ಸಚಿವ ಸ್ಥಾನ ನೀಡಿರುವುದನ್ನು ಪ್ರಸ್ತಾಪಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಈ ಕಾರ್ಯಗಳಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿದ್ದಾರೆ.

ನಗರದ ತ್ರಿಶೂಲ್ ಸಭಾಭವನದಲ್ಲಿ ಆಯೋಜಿ ಸಲಾಗಿದ್ದ ಬಿಜೆಪಿ ಕಾರ್ಯಕಾರಿಣಿಯ ಉದ್ಘಾಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಮೋದಿ ಬಾಲ್ಯದಿಂದ ಹಿಡಿದು ಮುಖ್ಯಮಂತ್ರಿಯಾಗುವವರೆಗೆ, ನಂತರ ಪ್ರಧಾನ ಮಂತ್ರಿಯಾಗುವವರೆಗೆ ನಡೆದು ಬಂದ ಹಾದಿಯನ್ನು ಸಿಂಗ್‌ ಮುಕ್ತ ಕಂಠದಿಂದ ಪ್ರಶಂಸಿಸಿದರು. 

ಮೋದಿ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಬಡವರ ಪರ ಮೋದಿ ಇದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮೋದಿ ಅವರ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿ ಎಂದವರು ಕರೆ ನೀಡಿದರು.

ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಲೋಕಸಭೆಯಲ್ಲಿ ಗೆಲುವುದು ಕಷ್ಟ ಆಗುವುದಿಲ್ಲ. ಆದರೆ, ವಿಧಾನಸಭಾ ಉಪ ಚುನಾವಣೆ, ಪಂಚಾಯ್ತಿ, ವಿಧಾನ ಪರಿಷತ್ ಹಾಗೂ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಮೋದಿ ಹೆಸರು ಹೇಳಿಕೊಂಡು ಗೆಲ್ಲುತ್ತೇವೆ ಎಂಬ ಭ್ರಮೆ ಬೇಡ ಎಂದು ತಿಳಿಸಿದರು.

ಕಾಂಗ್ರೆಸ್ ರಾಜ್ಯದಲ್ಲಿ ಸ್ವಲ್ಪ ಎದ್ದು ಕುಳಿತಿದೆ. ಪ್ರತಿಪಕ್ಷಗಳನ್ನು ಹಗುರವಾಗಿ ಭಾವಿಸಬಾರದು. ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಮಹಿಳಾ, ಎಸ್‌ಸಿ – ಎಸ್‌ಟಿ, ಯುವ ಮೋರ್ಚಾಗಳನ್ನು ಬಲಪಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಇಲ್ಲವಾದರೆ ಕಷ್ಟವಾಗುತ್ತದೆ ಎಂದವರು ಎಚ್ಚರಿಸಿದರು.

error: Content is protected !!