ರಂಭಾಪುರಿ ಜಗದ್ಗುರು
ದಾವಣಗೆರೆ, ಡಿ. 7 – ನಂಬಿಕೆ ಹಾಗೂ ವಿಶ್ವಾಸದಿಂದ ಮಾತ್ರ ಸಹಕಾರ ಸಂಘಗಳು ಹೆಮ್ಮರ ವಾಗಿ ಬೆಳೆಯುತ್ತವೆ. ನಂಬಿಕೆ ಕಳೆದುಕೊಂಡರೆ ಯಾವುದೇ ಸಂಘ – ಸಂಸ್ಥೆ ನೆಲ ಕಚ್ಚುವುದು ನಿಶ್ಚಿತ ಎಂದು ರಂಭಾಪುರಿ ಜಗದ್ಗುರು ಶ್ರೀ ಡಾ. ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ – ಆಪ್ ಸೊಸೈಟಿಯ ನೂತನ ಕಟ್ಟಡದ ಭೂಮಿ ಪೂಜೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಆಡಳಿತ ಮಂಡಳಿ ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಹೊಂದಬೇಕು ಮತ್ತು ಸಹಕಾರಿ ಬಂಧುಗಳ ಜೊತೆ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಜಂಗಮ ಸಮುದಾಯದ ಕುರಿತು ಮಾತನಾಡಿದ ಶ್ರೀಗಳು, ಜಂಗಮರಿಗೆ ಕೊಟ್ಟಿದ್ದು ಸಮಾಜಕ್ಕೆ ಮರು ಸಮರ್ಪಣೆಯಾಗುತ್ತದೆ. ಆಧುನಿಕ ಕಾಲದಲ್ಲಿ ವ್ಯವಸ್ಥೆ ಬದಲಾದರೂ, ಜಂಗಮ ಮೂಲತತ್ವ ಬದಲಾಗಿಲ್ಲ ಎಂದರು.
ದಾವಣಗೆರೆ ಜೊತೆ ಪಂಚಪೀಠಗಳು ಹೊಂದಿ ರುವ ಒಡನಾಟದ ಕುರಿತು ಮಾತನಾಡಿದ ಶ್ರೀಗಳು, ಶ್ರೀ ವೀರಗಂಗಾಧರ ಜಗದ್ಗುರುಗಳು ನಿರಂತರವಾಗಿ ಇಲ್ಲಿನ ರೇಣುಕ ಮಂದಿರದಲ್ಲಿ ಆಷಾಢ ಮಾಸದ ಪೂಜೆ ನೆರವೇರಿಸುತ್ತಾ ಬಂದಿದ್ದರು. 8 ಕೋಟಿ ರೂ. ವೆಚ್ಚದಲ್ಲಿ ರೇಣುಕ ಮಂದಿರ ಮರು ನಿರ್ಮಾಣವಾಗುತ್ತಿದ್ದು, ಮುಂದಿನ ಆಷಾಢ ಮಾಸದ ಪೂಜೆಯನ್ನು ತಾವು ಅಲ್ಲೇ ನೆರವೇರಿಸುವುದಾಗಿ ತಿಳಿಸಿದರು.
ರಂಭಾಪುರಿ ಪೀಠದ ವತಿಯಿಂದ ನಗರದಲ್ಲಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಉದ್ದೇಶ ಇದೆ. ಇದಕ್ಕೆ ಯೋಗ್ಯ ಸ್ಥಳವನ್ನು ದೂಡಾದಿಂದ ಒದಗಿಸಿದಲ್ಲಿ ನಿಲಯ ಸ್ಥಾಪನೆಗೆ ಅನುಕೂಲವಾಗಲಿದೆ ಎಂದು ಜಗದ್ಗುರುಗಳು ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರಿಗೆ ತಿಳಿಸಿದರು.
ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಿಂಗ್ ರಸ್ತೆಗೆ ಜಗದ್ಗುರು ರೇಣುಕಾಚಾರ್ಯರ ಹೆಸರು ಇಡಲು ಮೇಯರ್ ಎಸ್.ಟಿ. ವೀರೇಶ್ ಅವರು ಕ್ರಮ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ರಾಷ್ಟ್ರೀಯ ಬ್ಯಾಂಕುಗಳು ದೊಡ್ಡ ವ್ಯಕ್ತಿಗಳಿಗೆ ಸಾಲ ಕೊಡುತ್ತವೆ. ಆದರೆ, ಸಹಕಾರಿಗಳು ಮಧ್ಯಮ ವರ್ಗ ಹಾಗೂ ಬಡವರಿಗೆ ಸಾಲ ಸೌಲಭ್ಯ ಕೊಡುತ್ತವೆ. ಸಹಕಾರಿಗಳನ್ನು ಬೆಳೆಸಿದರೆ ಎಲ್ಲರಿಗೂ ಅನುಕೂಲ ಎಂದರು.
ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ. ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ನಡೆಸುವುದು ಸಂಸ್ಥೆಗಳ ಬೆಳವಣಿಗೆಗೆ ಸಹಕಾರಿ ಎಂದರು.
ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್ ಮಾತನಾಡಿ, ಭಾರತದಲ್ಲಿ ಸಹಕಾರ ವ್ಯವಸ್ಥೆ ಇಡೀ ಏಷಿಯಾದಲ್ಲೇ ದೊಡ್ಡದಾಗಿದೆ. ಸಹಕಾರ ಸಂಸ್ಥೆಗಳನ್ನು ಬೆಳೆಸಲು ನಿಷ್ಠೂರತೆ, ಪಾರದರ್ಶಕ ಆಡಳಿತ ಹಾಗೂ ಪ್ರಾಮಾಣಿಕ ಪ್ರಯತ್ನ ಬೇಕು ಎಂದರು.
ಶ್ರೀ ವೀರ ಮಾಹೇಶ್ವರ ಕ್ರೆಡಿಟ್ ಕೋ – ಆಪ್ ಸೊಸೈಟಿ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಮಾಶಂಕರ್ ಪ್ರಾರ್ಥಿಸಿದರು. ಬಸವರಾಜ ಸ್ವಾಗತಿಸಿದರೆ, ಎನ್. ಮಲ್ಲೇಶಯ್ಯ ನಿರೂಪಿಸಿದರು.