ಸಂಗೀತ ಲೋಕಕ್ಕೆ ಗವಾಯಿಗಳ ಕೊಡುಗೆ ಅನನ್ಯ

ಸಂಗೀತ ಕೆಲವರನ್ನು ಮಾತ್ರ ಆಲಿಂಗಿಸುತ್ತದೆ

ಸಂಗೀತ ಎಲ್ಲರನ್ನು ಆಕರ್ಷಿಸುತ್ತದೆ. ಹಸುಗಳು ಸಂಗೀತಕ್ಕೆ ಮರುಳಾಗುತ್ತವೆ. ಶಿಶುಗಳು ಸಂಗೀತಕ್ಕೆ ಮರುಳಾಗುತ್ತವೆ. ಹಾವುಗಳು ಕೂಡ ಸಂಗೀತ ಆಲಿಸಿ ಖುಷಿಪಡುತ್ತವೆ. ಸಂಗೀತ ಎಲ್ಲರನ್ನೂ ಆಕರ್ಷಿಸಿದ್ದರೂ ಕೂಡ ಕೆಲವರನ್ನು ಮಾತ್ರ ಆಲಿಂಗಿಸುತ್ತದೆ. ಅಂತಹ ಸಂಗೀತದ ಆಲಿಂಗನಕ್ಕೆ ಒಳಗಾದವರು ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ರಾಜಗುರು ಗುರುಸ್ವಾಮಿ ಕಲಕೇರಿ,
ಸೋಮನಾಥ್ ಮರಡೂರರಂತಹ ಗವಾಯಿಗಳು. ಇವರೆಲ್ಲಾ ಸಂಗೀತದೊಳಗೆ ಒಂದಾದವರು.

– ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ  

ದಾವಣಗೆರೆ, ಸೆ.19- ಗಾನಯೋಗಿ, ಶಿವಯೋಗಿ ಪಂ. ಪಂಚಾಕ್ಷರಿ ಗವಾಯಿ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪ್ರತಿಮವಾದುದು. ಉಭಯ ವಿಶಾರದರು ಅಂಧರ ಬಾಳಿಗೆ ಬೆಳಕಾಗಿದ್ದರು. ಜನರ ಕಲ್ಯಾಣಕ್ಕಾಗಿ ನೂರಾರು ವಚನಗಳನ್ನು ರಚಿಸಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಗುರು ಪುಟ್ಟರಾಜ ನಗರ (ಬಾಡಾ ಕ್ರಾಸ್)ದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ 250 ನೇ ಅನಂತ ಹುಣ್ಣಿಮೆ, ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳ 77 ನೇ ಹಾಗೂ ಲಿಂ. ಪಂ. ಡಾ. ಪುಟ್ಟರಾಜ ಕವಿ ಗವಾಯಿಗಳ 11 ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಗೀತ  ಬರೀ ಕಲೆಯಲ್ಲ, ಅದೊಂದು ಸಮಾಧಿ. ಸಂಗೀತದ ಮೂಲಕ ಶಿವಯೋಗವನ್ನು ಮಾಡ ಬಹುದು ಎಂಬುದನ್ನು ತೋರಿಸಿಕೊ ಟ್ಟವರು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು. ಅವರ ಸಂಗೀತ ಸೇವೆ ಅನನ್ಯವಾದುದು ಎಂದು ಹೇಳಿದರು.

ತ್ರಿಭಾಷಾ ಪಂಡಿತರಾಗಿದ್ದ ಪುಟ್ಟರಾಜ ಕವಿ ಗವಾಯಿಗಳು. ಸಾವಿರ ಸಾವಿರ ಕಲಾವಿದರಿಗೆ ಸಂಗೀತವನ್ನು ಕಲಿಸಿದ ಕೀರ್ತಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸಲ್ಲುತ್ತದೆ. ಇಂತಹ ವೀರೇಶ್ವರ ಪುಣ್ಯಾಶ್ರಮ ಇಲ್ಲದಿದ್ದರೆ ಅಂಧರ ಬದುಕು ಬೀದಿ ಪಾಲಾಗುತ್ತಿತ್ತು ಎಂದು ಜಗದ್ಗುರುಗಳು ಆತಂಕ ವ್ಯಕ್ತಪಡಿಸಿದರು.

ಹಾನಗಲ್ ಕುಮಾರಸ್ವಾಮಿಗಳ ದೂರದೃಷ್ಟಿಯಿಂದಾಗಿ ಪಂಚಾಕ್ಷರಿ ಗವಾಯಿಗಳು ದೊಡ್ಡ ಸಂಗೀತ ವಿದ್ವಾಂಸರಾಗಿ ಖ್ಯಾತಿಯನ್ನು ಪಡೆದಿ ದ್ದಾರೆ. ತಮ್ಮ ಪುರಾಣ-ಪ್ರವಚನದ ಮೂಲಕ ವೀರೇಶ್ವರ ಪುಣ್ಯಾಶ್ರಮ ವನ್ನು ಬಾನೆತ್ತರಕ್ಕೆ ಕೊಂಡೊಯ್ದ ಕೀರ್ತಿ ಅವರದ್ದು ಎಂದು ತಿಳಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿ, ಸಂಗೀತ ಸಾರಸ್ವತ ಲೋಕದ ಎರಡು ಕಣ್ಣುಗಳಾಗಿದ್ದಾರೆ.  ಆ ಕಣ್ಣುಗಳ ಪ್ರತಿರೂಪದಂತಿರುವ ಶ್ರೀ ಗುರು ಪುಟ್ಟರಾಜ ಪುರಸ್ಕಾರಕ್ಕೆ ಭಾಜನರಾಗಿರುವ ಸೋಮನಾಥ ಮರಡೂರ್ ಹಾಗೂ ರಾಜಗುರು ಗುರುಸ್ವಾಮಿ ಕಲಕೇರಿ ಅವರು ಸಂಗೀತ ಮತ್ತು ಸಾಹಿತ್ಯದ ಮೂಲಕ ಪೀಠದ ಭಕ್ತರ ಮನಗಳಿಗೆ ಸಂಗೀತ ವನ್ನು ತಲುಪಿಸುವ ಸೇವೆ ಅಮೂಲ್ಯ ವಾದುದು ಎಂದು ಹೇಳಿದರು.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಅಥಣಿ ಎಸ್. ವೀರಣ್ಣ, ಶ್ರೀ ಗುರು ಪುಟ್ಟರಾಜ ಪುರಸ್ಕಾರಕ್ಕೆ ಭಾಜನರಾದ ಪಂ. ರಾಜಗುರು ಗುರುಸ್ವಾಮಿ ಕಲಕೇರಿ ಹಾಗೂ ಪಂ. ಸೋಮನಾಥ ಮರಡೂರು ಅವರು ಮಾತನಾಡಿದರು. 

ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ಶ್ರೀ ಗುರು ಪಂಡಿತ ಪಂಚಾಕ್ಷರಿ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಪದಾಧಿಕಾರಿಗಳಾದ ಟಿ.ಕೆ. ಕರಿಬಸಪ್ಪ, ಎ.ಎಸ್. ಮೃತ್ಯುಂಜಯ, ಜೆ.ಎನ್. ಕರಿಬಸಪ್ಪ, ವೈ. ರುದ್ರೇಶ್, ಹೆಚ್.ವಿ. ಮಂಜುನಾಥ್, ಬಸವನ ಗೌಡ್ರು, ಬಕ್ಕೇಶ್ ನಾಗನೂರು ಮತ್ತಿತರರು ಉಪಸ್ಥಿತರಿದ್ದರು. 

ಆವರಗೆರೆ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ನೃತ್ಯ ರೂಪಕ ಪ್ರದರ್ಶಿಸಿದರು.ಶಿವಮೂರ್ತಿಸ್ವಾಮಿ ಸ್ವಾಗತಿಸಿದರು. ಬಿ. ಅಣ್ಣೇಶ್ ನಿರೂಪಿಸಿದರು.

error: Content is protected !!