ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಅಭಿಮತ
ಮಲೇಬೆನ್ನೂರು, ಡಿ.7- ಬಿಜೆಪಿ ಯಾವುದೇ ಜಾತಿ, ಧರ್ಮ ನಂಬಿಲ್ಲ. ನಮಗೆ ನಮ್ಮ ಕಾರ್ಯಕರ್ತರೇ ಶಕ್ತಿಯಾಗಿದ್ದು, ಅವರನ್ನು ನಂಬಿ ಬಿಜೆಪಿ ಬೆಳೆದಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದರು.
ಇಲ್ಲಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ಮಲೇಬೆನ್ನೂರು ಪುರಸಭೆ ಚುನಾವಣೆ ಅಂಗವಾಗಿ ನಿನ್ನೆ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರ, ಕಾರ್ಯಕರ್ತರ, ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಯಲ್ಲಿ ಕಾರ್ಯಕರ್ತರ ಮಾತಿಗೆ ಮನ್ನಣೆ ಇದ್ದು, ಪುರಸಭೆ ಚುನಾವಣೆಗೆ ಯಾರು ಸ್ಪರ್ಧಿಸಬೇಕೆಂಬುದನ್ನು ಆಯಾ ವಾರ್ಡಿನ ಕಾರ್ಯಕರ್ತರೇ ಆಯ್ಕೆ ಮಾಡಿ, ಅವರ ಗೆಲುವಿಗೆ ಶ್ರಮಿಸಬೇಕೆಂದು ವೀರೇಶ್ ಹೇಳಿದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಲೇಬೆನ್ನೂರು ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದರೆ ಸಿಎಂ, ಸಚಿವರ ಬಳಿ ಹೋಗಿ ಚುನಾವಣೆಯಲ್ಲಿ ನಾವು ಮಾಡಿರುವ ಸಾಧನೆ ತಿಳಿಸಿ ಅನುದಾನ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಚುನಾವಣೆಯ ಉಸ್ತುವಾರಿಗಳೂ ಆದ ದಾವಣಗೆರೆ ಪಾಲಿಕೆ ಸದಸ್ಯರಾದ ಶ್ರೀಮತಿ ಉಮಾ ಪ್ರಕಾಶ್ ಮಾತನಾಡಿ, ಪುರಸಭೆಯ 23 ಸ್ಥಾನಗಳಲ್ಲಿ ಬಿಜೆಪಿ 14 ಸ್ಥಾನ ಗೆಲ್ಲುವ ಸಂಕಲ್ಪ ಮಾಡಬೇಕು. ಅದಕ್ಕಾಗಿ ನಾವು ಸಿದ್ಧತೆ ಮಾಡಿಕೊಂಡು ಯಾವುದೇ ಗೊಂದಲವಿಲ್ಲದೇ ಒಗ್ಗಟ್ಟಿನಿಂದ ಚುನಾವಣೆ ಮಾಡೋಣ ಎಂದರು.
ಜಿ.ಪಂ. ಮಾಜಿ ಸದಸ್ಯ ಹಾಗೂ ಪಟ್ಟಣದ ಬಿಜೆಪಿ ಮುಖಂಡ ಬಿ.ಎಂ.ವಾಗೀಶ್ ಸ್ವಾಮಿ ಮಾತನಾಡಿ, ಕಾಂಗ್ರೆಸ್ಗೆ ಅಲ್ಪಸಂಖ್ಯಾತರನ್ನು ಬಿಟ್ಟರೆ ಬೇರೆ ಯಾವ ಜನರ ಬೆಂಬಲ ಇಲ್ಲದಂತಾಗಿದೆ.
ಆದರೆ, ಬಿಜೆಪಿಗೆ ಎಲ್ಲಾ ಜನರ ಬೆಂಬಲವೂ ಇರುವುದರಿಂದ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಆಕಾಂಕ್ಷಿಗಳು ಟಕೆಟ್ ಯಾರಿಗೇ ಸಿಕ್ಕರೂ ಬೇಸರವಾಗದೆ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.
ಚುನಾವಣೆಯ ಪ್ರಭಾರಿ ಹಾಗೂ ಜಿಲ್ಲಾ ಬಿಜೆಪಿಯ ಮಂಜಾನಾಯ್ಕ, ಸಹ ಪ್ರಭಾರಿ ಅರಕೆರೆ ಹನುಮಂತಪ್ಪ, ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್ ಮತ್ತು ಇತರರು ಮಾತನಾಡಿದರು.
ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಮುಖಂಡರಾದ ತಳಸದ ರೇವಣಸಿದ್ದಪ್ಪ, ಕೆ.ಜಿ.ವೀರನಗೌಡ, ಜಿಗಳೇರ ಹಾಲೇಶಪ್ಪ, ಬಿ.ಸುರೇಶ್, ಕಣ್ಣಾಳ್ ಧರ್ಮಣ್ಣ, ಪಾಳೇಗಾರ್ ನಾಗರಾಜ್, ಕೇಶವಾಚಾರ್, ಬಿ.ಚಂದ್ರಪ್ಪ, ಪಾನಿಪೂರಿ ರಂಗನಾಥ್, ಗೌಡ್ರ ಮಂಜಣ್ಣ, ಪಿ.ಆರ್.ರಾಜು, ಎ.ಕೆ.ಲೋಕೇಶ್, ಬಿ.ಮಂಜುನಾಥ್, ಕೆ.ಜಿ.ರಂಗನಾಥ್, ಎ.ಕೆ.ನಾಗರಾಜ್, ಹುಳ್ಳಳ್ಳಿ ಸಿದ್ದೇಶ್, ಬೆಣ್ಣೆಹಳ್ಳಿ ಬಸವರಾಜ್, ಉಡೇದರ್ ಸಿದ್ದೇಶ್, ಟಿ.ಸಂತೋಷ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.