ಸುವರ್ಣ ಸಮಯದಲ್ಲಿ ಭತ್ತದ ವ್ಯಾಪಾರಿಯ ಗರಿಷ್ಠ ಹಣ ವಾಪಸ್

ಸಿಇಎನ್ ಅಪರಾಧ ಪೊಲೀಸರ ಯಶಸ್ವಿ ಕಾರ್ಯಾಚರಣೆ

ದಾವಣಗೆರೆ, ಸೆ.16- ಸೈಬರ್ ಅಪರಾಧಗಳು ಸಂಭವಿಸಿದ 1 ಗಂಟೆಯ ಅವಧಿ ಒಳಗಿನ ಸುವರ್ಣ ಸಮಯದಲ್ಲಿ ಸೈಬರ್ ಅಪರಾಧ ಮಾಹಿತಿ ವರದಿಯನ್ನು ತುರ್ತು ಸ್ಪಂದನ ವ್ಯವಸ್ಥೆ 112 ಮೂಲಕ ದೂರು ಸಲ್ಲಿಸಿದರೆ ವಂಚನೆಗೊಳಗಾದ  ಹಣವನ್ನು ರಕ್ಷಿಸಿಕೊಳ್ಳುವ ಸುವರ್ಣ ಅವಕಾಶ ಇದೆ.

ಹೀಗೆ ಆನ್‍ಲೈನ್ ಮುಖೇನ ವಂಚನೆಗೊಳಗಾದ ಭತ್ತದ ವ್ಯಾಪಾರಿಯೋರ್ವರ ಹಣದಲ್ಲಿ ಗರಿಷ್ಠ ಪ್ರಮಾಣದ ಹಣವನ್ನು ಸುವರ್ಣ ಸಮಯದಲ್ಲಿಯೇ ವಾಪಾಸ್ ಕೊಡಿಸುವಲ್ಲಿ ಇಲ್ಲಿನ ಸಿಇಎನ್ ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಸರಸ್ವತಿ ಬಡಾವಣೆಯ ಭತ್ತದ ವ್ಯಾಪಾರಿ ಬಿ. ವೆಂಕಟೇಶ್ವರ ರಾವ್ ಅವರಿಗೆ ಆಗಸ್ಟ್ 10, 2021 ರಂದು ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ ಅಪರಿಚಿತನೋರ್ವ ಎಟಿಎಂ ಬ್ಲಾಕ್ ಆಗಿದೆ ಎಂದು ನಂಬಿಸಿ, ಬ್ಯಾಂಕ್ ಖಾತೆಯ ವಿವರ ಹಾಗೂ ಎಟಿಎಂ ಕಾರ್ಡ್ ನಂಬರ್, ಓಟಿಪಿ ನಂಬರ್ ಪಡೆದು ಖಾತೆಯಿಂದ 2 ಬಾರಿ ಒಟ್ಟು 1 ಲಕ್ಷ ರೂ.  ಹಣವನ್ನು ಆನ್ ಲೈನ್ ಮೂಲಕ ವಂಚನೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ನಂತರ ಕೂಡಲೇ ದೂರು ದಾಖಲಿಸಿಕೊಂಡಿದ್ದ ಸಿಇಎನ್ ಅಪರಾಧ ಪೊಲೀಸರು ವೆಂಕಟೇಶ್ವರ ರಾವ್ ಖಾತೆಯಿಂದ ವಂಚನೆಯಾದ ಮೊತ್ತ ಹಾಗೂ ಆರೋಪಿತನ ಪತ್ತೆಗಾಗಿ ಸಂಬಂಧಿಸಿದ ವ್ಯಾಲೆಟ್ ಮತ್ತು ಬ್ಯಾಂಕ್‌ಗಳಿಗೆ ಆರೋಪಿತನ ಖಾತೆಯಲ್ಲಿದ್ದ 75,696 ರೂ. ಹಣವನ್ನು ಫ್ರೀಜ್ ಮಾಡಿಸಿ, ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ವಂಚನೆಗೊಳಗಾದ ವೆಂಕಟೇಶ್ವರ ರಾವ್ ಅವರಿಗೆ ಹಣವನ್ನು ನೀಡಲು ಸಂಬಂಧಿಸಿದ ಬ್ಯಾಂಕ್‍ಗಳಿಗೆ ಆದೇಶಿಸಲು ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಹಣ ನೀಡಲು ಆದೇಶಿಸಿದೆ ಎಂದು ಸಿಇಎನ್ ಅಪರಾಧ ಪೊಲೀಸರು ತಿಳಿಸಿದ್ದಾರೆ.

ಸುವರ್ಣ ಸಮಯವೇ ಸುರ್ವಣಾವಕಾಶ: ಸೈಬರ್ ಅಪರಾಧ ಪ್ರಕರಣಗಳಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತುರ್ತಾಗಿ ತನಿಖೆ ನಡೆಸಿ ವಂಚನೆಗೊಳಗಾದ ಪಿರ್ಯಾದಿಯವರಿಗೆ ಹಣ ವಾಪಾಸ್ ಕೊಡಿಸುವಲ್ಲಿ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೈಬರ್ ಅಪರಾಧಗಳು ಸಂಭವಿಸಿದ ತಕ್ಷಣವೇ ಸೈಬರ್ ಅಪರಾಧಗಳ ಸುವರ್ಣ ಸಮಯ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದರೆ ಕೂಡಲೇ ಸೈಬರ್ ಆರೋಪಿ ಬ್ಯಾಂಕ್ ಖಾತೆಯ ಚಾಲನೆಯನ್ನು ತಡೆ ಹಿಡಿಯಬಹುದಾಗಿದೆ. ಹಾಗಾಗಿ ಸಾರ್ವಜನಿಕರು ಸೈಬರ್ ಅಪರಾಧಗಳು ಘಟಿಸಿದ ಸುವರ್ಣ ಸಮಯವಾಗಿರುವ 1 ಗಂಟೆಯ ಅವಧಿ ಒಳಗಾಗಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡುವ ಮೂಲಕ ಹಣವನ್ನು ರಕ್ಷಿಸಿಕೊಳ್ಳುವಂತೆ ಸಿಇಎನ್ ಅಪರಾಧ ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!