ಜಿಲ್ಲೆಯಲ್ಲಿ 93 ಸಾವಿರ ಜನರಿಗೆ ಲಸಿಕೆ

ಬೃಹತ್ ಲಸಿಕಾ ಮೇಳಕ್ಕೆ ಚಾಲನೆ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಸೆ.17- ಜಿಲ್ಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕೊರೊನಾ ಲಸಿಕಾ ಮೇಳದಲ್ಲಿ 582 ಲಸಿಕಾ ಕೇಂದ್ರಗಳಲ್ಲಿ 93 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ.

ಇಲ್ಲಿನ ವಿದ್ಯಾನಗರದ ಶಿವಪಾರ್ವತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಲಸಿಕಾ ಕೇಂದ್ರದಲ್ಲಿ  ಲಸಿಕಾ ಮೇಳಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿ ಈಗಾಗಲೇ 10.52 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇಂದು 582 ಕೇಂದ್ರಗಳಲ್ಲಿ ಸುಮಾರು 1 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಗರದ 45 ವಾರ್ಡ್‌ಗಳು, 12 ಅರ್ಬನ್ ಸೆಂಟರ್‌ಗಳು, ಜಿಲ್ಲಾ ಚಿಗಟೇರಿ ಆಸ್ಪತ್ರೆ ಸೇರಿ 58 ಕಡೆ ಲಸಿಕೆ ನೀಡಲಾಗುತ್ತಿದೆ. ಅಲ್ಲದೆ ನಗರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಗಳಲ್ಲೂ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದೆ. ಡಿಸೆಂಬರ್ ಅಂತ್ಯದೊಳಗೆ ದೇಶದ ಪ್ರತಿಯೊಬ್ಬರೂ ಲಸಿಕೆ ಪಡೆಯಲಿದ್ದಾರೆ ಎಂದು ಹೇಳಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವಾಗಿದ್ದು, ದೇಶದ ಎಲ್ಲಾ ಜನತೆಗೆ ಉಚಿತವಾಗಿ ಲಸಿಕೆ ನೀಡುವ ಮೂಲಕ ಪ್ರಪಂಚದಲ್ಲಿ ಯಾರೂ ಮಾಡದ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ಅಮೇರಿಕಾ ಹಾಗೂ ಇಂಗ್ಲೆಂಡ್‌ಗಳಲ್ಲಿನ ಸರ್ವೇ ಪ್ರಕಾರ ಪ್ರಧಾನಿ ಮೋದಿಯವರು ಪ್ರಪಂಚದಲ್ಲಿಯೇ ನಂಬರ್ ಒನ್ ಆಗಿದ್ದಾರೆ. ಅವರು ಇನ್ನೂ ನೂರಾರು ಕಾಲ ಬಾಳಿ ದೇಶದ ಚುಕ್ಕಾಣಿ ಹಿಡಿದು ಮುನ್ನಡೆಸಲಿ. ದೇಶದ ಆರ್ಥಿಕತೆ, ಉಗ್ರಗಾಮಿಗಳ ನಿಗ್ರಹ, ಹಿಂದುಳಿದ ವರ್ಗ, ಮಹಿಳೆಯರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸ ಮುಂದುವರೆಯಲಿ ಎಂದು ಆಶಿಸಿದರು.

ನಕಲಿ ಹಿಂದೂವಾದಿಗಳಲ್ಲ: ಬಿಜೆಪಿ ಹಿಂದುತ್ವದಿಂದಲೇ ಬಂದ ಪಕ್ಷ ಎನ್ನುವುದು ಸತ್ಯ. ಆದರೆ ನಕಲಿ ಹಿಂದೂವಾದಿಗಳು ಎನ್ನುವುದು ಸುಳ್ಳು. ಇದು ಕಾಂಗ್ರೆಸ್‌ನವರ ಆರೋಪ ಮಾತ್ರ ಎಂದು ಸಂಸದ ಸಿದ್ದೇಶ್ವರ ಹೇಳಿದರು.

ಇತ್ತೀಚೆಗೆ ಸಾರ್ವಜನಿಕ ಪ್ರದೇಶಗಳಲ್ಲಿರುವ ದೇವಾಲಯಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ ದೇವಾಲಯಗಳನ್ನು ಒಡೆದಿರುವುದು ಆಕಸ್ಮಿಕವಾಗಿ ನಡೆದ ಘಟನೆ. ಇದನ್ನು ನಾನೂ ಖಂಡಿಸುತ್ತೇನೆ. ಸ್ಥಳೀಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳ  ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ರಾಂಪುರ-ಹೆದ್ನೆ ರಸ್ತೆ ದುರಸ್ತಿ ಮಾಡದೆ ಯುವತಿಯೊಬ್ಬಳು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ವಿಷಯವನ್ನು ಪತ್ರಿಕೆಗಳಲ್ಲಿ ನೋಡಿ, ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೆ. ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ರಸ್ತೆ ಕಾಮಗಾರಿ ಆರಂಭವಾಗಿದೆ ಎಂದರು.

ಚುನಾವಣೆ ವೇಳೆ ತಮ್ಮ ಪತ್ನಿ ರಾಂಪುರಕ್ಕೆ ಮತ ಯಾಚನೆಗೆ ತೆರಳಿದ್ದ ಸಂದರ್ಭದಲ್ಲಿ ಜನರು ರಸ್ತೆ ರಿಪೇರಿ ಮಾಡಿಸುವಂತೆ ಹೇಳಿದ್ದರು. ನಾನು ಗೆದ್ದ ನಂತರ ನನ್ನ ಪತ್ನಿಯ ಪ್ರಥಮ ಬೇಡಿಕೆ ರಸ್ತೆ ರಿಪೇರಿ ಮಾಡಿಸುವುದೇ ಆಗಿತ್ತು. ಆಗ ರಸ್ತೆ ಮೆಟ್ಲಿಂಗ್ ಮಾಡಿಸಲಾಗಿತ್ತು. 1.3 ಕಿ.ಮೀ. ನಷ್ಟು ರಸ್ತೆ ಮಾತ್ರ ಹಾಳಾಗಿತ್ತು. ಇದೀಗ ಅದೂ ಸರಿಯಾಗಲಿದೆ ಎಂದು  ಹೇಳಿದರು.

ನಂತರ ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೂಪರ್ ಮಾರ್ಕೆಟ್ ಕೇಂದ್ರಗಳ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದ ಸಂಸದರು, ಜಿಲ್ಲಾಧಿಕಾರಿಗಳು ಫಲಾನುಭವಿಗಳ ಯೋಗಕ್ಷೇಮ ವಿಚಾರಿಸಿದರು.

ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ : ನಗರದ ದೊಗ್ಗಳ್ಳಿ ಕಾಂಪೌಡ್‍ಗೆ ಭೇಟಿ ನೀಡಿ, ಅಲ್ಲಿನ ಕೊಳಚೆ ಪ್ರದೇಶವನ್ನು ವೀಕ್ಷಿಸಿದ ಸಂಸದರು, ಅಲ್ಲಿನ ಜನರಿಗೆ ಕೊಳಚೆ ಪ್ರದೇಶದಲ್ಲಿ ಓಡಾಡಲು ಅವ್ಯವಸ್ಥೆಯಾಗುತ್ತಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗಿ ಸುತ್ತ-ಮುತ್ತಲಿನ ಪ್ರದೇಶ ಮಲಿನಗೊಂಡಿದ್ದು, ಜನರು ಜೀವಿಸಲು  ಕಷ್ಟಕರವಾಗಿದೆ. ಕೂಡಲೇ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸುವ್ಯವಸ್ಥಿತ ರಸ್ತೆ ಹಾಗೂ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.

ಮಾಜಿ ಶಾಸಕ ಬಸವರಾಜ ನಾಯ್ಕ,  ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ, ದಿಳ್ಯೆಪ್ಪ, ಡಿಹೆಚ್‍ಒ ಡಾ.ನಾಗರಾಜ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!