ಎಸ್ಸೆಸ್ ಅಧ್ಯಕ್ಷತೆಯಲ್ಲಿನ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ಟ್ರಸ್ಟ್ ತೀರ್ಮಾನ
ದಾವಣಗೆರೆ, ಸೆ.26- ಕೋವಿಡ್ ನಿಯಮಾವಳಿ ಅನುಸಾರ ಈ ವರ್ಷ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲು ದೇವಸ್ಥಾನದ ಟ್ರಸ್ಟ್ ತೀರ್ಮಾನಿಸಿತು.
ಇಂದು ದೇವಸ್ಥಾನದ ಪ್ರಸಾದ ನಿಲಯದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಕ್ಟೋಬರ್ 7ರಂದು ದೀಪ ಹಾಕುವ ಕಾರ್ಯಕ್ರಮದೊಂದಿಗೆ ವಿಜೃಂಭಣೆೆಯ ನವರಾತ್ರಿ ದಸರಾ ಉತ್ಸವಕ್ಕೆ ಚಾಲನೆ ನೀಡಲು ಟ್ರಸ್ಟ್ ನಿರ್ಧರಿಸಿತು.
ಅಕ್ಟೋಬರ್ 7ರಿಂದ ಪ್ರತಿ ದಿನವೂ ಅಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು. ಅ.15 ರಂದು ವಿಜಯದಶಮಿ ಆಚರಿಸಲಾಗುವುದು. ಅ.16 ರಂದು ಹಿಂದಿನ ವರ್ಷಗಳಂತೆ ಯಥಾ ಪ್ರಕಾರ ಸಾಮೂಹಿಕ ವಿವಾಹ ನಡೆಸಲಾಗುವುದು. ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮಾಡಲು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. ಇದಕ್ಕೆ ಗೌರವಾಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ಅನುಮತಿಸಿದರಲ್ಲದೇ, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ದೇವಸ್ಥಾನದ ಕಳೆದ ವರ್ಷದ ಲೆಕ್ಕ ಪತ್ರ ಹಾಗೂ ಮಳಿಗೆಗಳ ಕಾಮಗಾರಿ ವಿವರವನ್ನು ಮಂಡಿಸಲಾಯಿತು. ವಾರ್ಷಿಕವಾಗಿ 1.77 ಕೋಟಿ ರೂ. ವೆಚ್ಚವಾಗಿದೆ ಎಂದು ಸದಸ್ಯ ಯಜಮಾನ್ ಮೋತಿ ವೀರಣ್ಣ ಸಭೆಗೆ ವಿವರಿಸಿದರು.
ದೇವಸ್ಥಾನದ ಮಳಿಗೆಗಳ ನಿರ್ಮಾಣದಲ್ಲಿ ಲೋಪದ ಆರೋಪ: ದೇವಸ್ಥಾನ ಸಮಿತಿಯ ಹಣದಿಂದ ಶಿವಾಲಿ ಚಿತ್ರಮಂದಿರ ರಸ್ತೆ ಹಾಗೂ ಕೊಂಡಜ್ಜಿ ರಸ್ತೆಯಲ್ಲಿ ನಿರ್ಮಿಸಲಾದ ಒಟ್ಟು 32 ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 3.28 ಕೋಟಿ ರೂ. ನೀಡಿದ್ದು, ಬಳಸಿದ ವೆಚ್ಚದಲ್ಲಿ 80 ಲಕ್ಷ ರೂ. ವ್ಯತ್ಯಾಸವಾಗಲಿದೆ. ಚದರಡಿಗೆ ನಿರ್ದಿಷ್ಟ ವೆಚ್ಚ ನಮೂದಾಗಿದ್ದರೂ 50 ಲಕ್ಷ ರೂ.ಗಳನ್ನು ಕೇವಲ ಜಿಎಸ್‌ಟಿ ಶುಲ್ಕ ನೀಡಲಾಗಿದೆ. ತಯಾರಿಸಿದ ಎಸ್ಟಿಮೇಟ್‌ಗೂ, ನಿರ್ಮಾಣಕ್ಕೂ ತಗುಲಿದ ವೆಚ್ಚದಲ್ಲಿ ವ್ಯತ್ಯಾಸವಾಗಿದ್ದು, ಗುತ್ತಿಗೆ ಪಡೆದ ಇಂಜಿನಿಯರ್ ರಿಂದ ಲೋಪವೆಸಿದ್ದಾರೆ. ಅಲ್ಲದೇ ಮಳಿಗೆಗಳ ನಿರ್ಮಾಣದಲ್ಲಿ ಗುಣಮಟ್ಟ ಇಲ್ಲವಾಗಿದ್ದು, ಒಂದು ವರ್ಷದಲ್ಲಿ ಗೋಡೆಗಳು ಬಿರುಕುಬಿಟ್ಟಿವೆ ಎಂದು ತಾವು ಸಂಗ್ರಹಿಸಿದ ಸಾಕ್ಷಿ ಸಹಿತವಾದ ಫೋಟೋಗಳು ಮತ್ತು ದಾಖಲೆಗಳ ಮುಖೇನ ಮುಖಂಡ ಯಶವಂತರಾವ್ ಜಾಧವ್ ಸಭೆಯಲ್ಲಿ ಆರೋಪಿಸಿದರು.
ಆರು ಜನರ ಸಮಿತಿ ರಚಿಸಿ ಬೇರೊಬ್ಬ ಇಂಜಿನಿಯರ್ ಒಡಗೂಡಿ ಮಳಿಗೆಗಳ ಸ್ಥಿತಿ ಹಾಗೂ ಘಟಕ ವೆಚ್ಚ ಕುರಿತು ಪರಿಶೀಲನೆ ನಡೆಸಲು ಡಾ. ಶಾಮನೂರು ಶಿವಶಂಕರಪ್ಪ ಸೂಚಿಸಿದರು. ಕಾಮಗಾರಿ ಲೋಪವಾಗಿದ್ದರೆ ಸರಿಪಡಿಸಲು ತಾಕೀತು ಮಾಡಿದರು.
ಭಕ್ತರು ನೀಡಿದ ಕಾಣಿಕೆ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಿಟ್ಟು ಬೇರೆ ಯಾವುದಕ್ಕೂ ಬಳಸಬಾರದು ಎಂದು ಸಭೆಯಲ್ಲಿ ಭಕ್ತರು, ಕೆಲ ಸದಸ್ಯರು ಮನವಿ ಮಾಡಿದರು.
ಸಭೆಯಲ್ಲಿ ಟ್ರಸ್ಟ್‍ನ ಸದಸ್ಯರುಗಳಾದ ಗೌಡ್ರ ಚನ್ನಬಸಪ್ಪ, ಜೆ.ಕೆ. ಕೊಟ್ರಬಸಪ್ಪ, ಹೆಚ್.ಬಿ. ಗೋಣೆಪ್ಪ, ಹನುಮಂತರಾವ್ ಸಾವಂತ್, ಹನುಮಂತರಾವ್ ಜಾಧವ್, ಉಮೇಶ್ ಸಾಳಂಕಿ, ಸೊಪ್ಪಿನವರ ಗುರುರಾಜ್, ಬಿ.ಕೆ. ರಾಮಕೃಷ್ಣ, ಸೊಪ್ಪಿನವರ ಗುರುರಾಜ್, ಮುಖಂಡರುಗಳಾದ ನಗರ ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್, ಕರಿಗಾರ ಬಸಪ್ಪ, ಬಳ್ಳಾರಿ ಷಣ್ಮುಖಪ್ಪ, ಪಿ.ಜೆ. ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಕವಿರಾಜ್ ಸೇರಿದಂತೆ ಇತರರು ಇದ್ದರು.