ಮೈಸೂರಿನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಕಳವಳ
ಹರಿಹರ, ಡಿ.6- ಭಾರತ ಬದಲಾಗುವುದು ಮತದಾರರಿಂದಲೇ ಹೊರತು ಜಾತಿ, ಧರ್ಮದಿಂದಲ್ಲ. ಹಾಗಾಗಿ ನೀವು ನಿಮ್ಮ ಆಯ್ಕೆ ಮಾಡಿಕೊಳ್ಳಿ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ಹನಗವಾಡಿ ಬಳಿ ಇರುವ ಪ್ರೊ. ಬಿ.ಕೃಷ್ಣಪ್ಪ ಅವರ ಮೈತ್ರಿ ವನದಲ್ಲಿ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹಾಮಾನವತಾ ವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿಬ್ಬಾಣ ದಿನ ಹಾಗೂ ಡಿಎಸ್-4 ರಾಜ್ಯ ಕಾರ್ಯಕಾರಿಣಿ ಸಮಾವೇಶ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ನೀವು ಹಣ ಪಡೆದು ಮತ ಹಾಕಿದ್ದರ ಪರಿಣಾಮ ಇವತ್ತು ಭಾರತವನ್ನೇ ಮಾರಾಟಕ್ಕೆ ಇಟ್ಟಿದ್ದಾರೆ. `ಭಾರತ ಸರ್ಕಾರ’ ಎಂಬ ನಾಮಫಲಕ ಇನ್ನು ಮುಂದೆ ಇರುವುದಿಲ್ಲ. ಏಕೆಂದರೆ ಎಲ್ಲಾ ಖಾಸಗೀಕರಣ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ, ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ತಿಪ್ಪೆಗೆಸೆದು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ಎಂದು ತೀರ್ಥ, ಪ್ರಸಾದ ಕೊಡುವವರು ಹೇಳುತ್ತಿದ್ದಾರೆ. ಜೊತೆಗೆ ದಲಿತರ, ಶೂದ್ರರ ಕೈಯ್ಯಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಅಂಬೇಡ್ಕರ್ ಇಲ್ಲದ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದಕ್ಕೆ ಸಾಕಷ್ಟು ಘಟನೆಗಳು ಸಾಕ್ಷಿಯಾಗಿವೆ. ದೇಶದಲ್ಲಿ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ ನಿರಂತರವಾಗಿದ್ದು, ಶೇ.40 ಜನ ಅಪೌಷ್ಟಿಕತೆಯಿಂದ ನರಳಾಡುತ್ತಿದ್ದಾರೆ. 72 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮಾರಾಟವಾಗಿದ್ದು, 2.90 ಲಕ್ಷ ಹುದ್ದೆ ಮಾಯವಾಗಿವೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಪ್ರತಿಮೆ, ಫೋಟೋಗಳಿಗೆ ಹೂಮಾಲೆ ಹಾಕಿ, ಕ್ಯಾಂಡಲ್ ಹಚ್ಚಿದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ನಿಮ್ಮಲ್ಲಿರುವ ದ್ವೇಷ, ಅಸೂಯೆ, ಕಿಚ್ಚು, ಪ್ರತಿಷ್ಠೆ ಬಿಟ್ಟು ಎಲ್ಲರೂ ಒಂದಾಗಿ ಹೋರಾಟಕ್ಕಿಳಿದರೆ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ನಮಗೆ ನಮ್ಮ ತಾಯಿ ಜನ್ಮ ನೀಡಿದರೆ, ಅಂಬೇಡ್ಕರ್ ಬದುಕು ಕಟ್ಟಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಒಬ್ಬರ ಕೈಯ್ಯಲ್ಲಿ ಸಿಕ್ಕರೆ ಅದು ನಾಶವಾಗಿ, ಗುಲಾಮಗಿರಿ ಪದ್ದತಿ ಮತ್ತೆ ಜಾರಿಗೆ ಬರುತ್ತದೆ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು. ಅದಕ್ಕಾಗಿ ನಾವು ವ್ಯಕ್ತಿ ಪೂಜೆ ನಿಲ್ಲಿಸಿ, ಜಾಗೃತ ಸಮಾಜ ಕಟ್ಟಬೇಕು. ಸಂವಿಧಾನ ಪೀಠಿಕೆ ಬದಲಾವಣೆಗೆ ಕೆಲವರು ಯತ್ನಿಸುತ್ತಿದ್ದು, ಅದರ ವಿರುದ್ಧ ಶೋಷಿತ ಎಲ್ಲಾ ಸಮುದಾಯಗಳು ಒಂದಾಗಿ ಹೋರಾಟಕ್ಕಿಳಿಯಲು ಪ್ರೊ. ಬಿ.ಕೃಷ್ಣಪ್ಪನವರ ಈ ಪುಣ್ಯ ಭೂಮಿಯಿಂದಲೇ ಸಂಕಲ್ಪ ಮಾಡಬೇಕೆಂದು ಸ್ವಾಮೀಜಿ ಹುರಿದುಂಬಿಸಿದರು.
ಚಿಂತಕ ಡಾ. ಎ.ಬಿ.ರಾಮಚಂದ್ರಪ್ಪ ಅವರು `ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ ಮರ್ಮಗಳು’ ಕುರಿತು ಉಪನ್ಯಾಸ ನೀಡಿ, ಮೀಸಲಾತಿಯನ್ನು ಬುಡ ಸಮೇತ ಕಿತ್ತೊಗೆಯಲು ಖಾಸಗೀಕರಣ ಎಂಬ ಅಸ್ತ್ರ ಬಳಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಲ್ಲಾ ಜನರು ಜಾಗೃತರಾಗದಿದ್ದರೆ ಉಳಿಗಾಲವಿಲ್ಲ ಎಂದರು.
ಹರಪನಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ರಾಜಪ್ಪ ಅವರು, `ಅಸ್ಪೃಶ್ಯತೆಯ ಕರಾಳತೆ ಮತ್ತು ದೌರ್ಜನ್ಯ, ದಬ್ಬಾಳಿಕೆಗಳ ಅವಲೋಕನ’ ಕುರಿತು ಹಾಗೂ ದಾವಣಗೆರೆ ವಿ.ವಿ ಯ ಪ್ರಾಧ್ಯಾಪಕ ಡಾ. ಹೆಚ್.ವಿಶ್ವನಾಥ್ ಅವರು `ಎಸ್.ಸಿ.ಪಿ – ಟಿ.ಎಸ್.ಪಿ ಉಪಯೋಜನೆ ಕಾಯ್ದೆಯ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು.
ಚಿತ್ರದುರ್ಗದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಶ್ರೀ ಸಿದ್ದರಾಮ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೆ ತಂದಿರುವ ಓಟಿನ ಸಮಾನತೆ ಇಲ್ಲದಿದ್ದರೆ, ನಮ್ಮನ್ನು ಮಾತನಾಡಿಸುವವರು ಇರುತ್ತಿರಲಿಲ್ಲ ಎಂದರು. ಹೆಗ್ಗರೆ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಎಸ್-4 ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ವೈ.ರಾಮಪ್ಪ, ಹೊದಿಗೆರೆ ರಮೇಶ್, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ, ವಕೀಲ ರಾಘವೇಂದ್ರ ನಾಯ್ಕ, ಸೈಯದ್ ಎಜಾಜ್, ಜಬೀನಾ ಖಾನಂ, ರೇಣುಕಾ ಯಲ್ಲಮ್ಮ, ಎಸ್.ಚೈತ್ರಾ, ಡಿ.ಎಸ್.ಬಾಬಣ್ಣ, ಗೌರಿಹಳ್ಳಿ ಮಂಜುನಾಥ್, ಸಂತೋಷ್ ಎಂ.ನೋಟದವರ ಮತ್ತು ಇತರರು ಭಾಗವಹಿಸಿದ್ದರು.
ಶಾಸಕ ಎಸ್.ರಾಮಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ನಂದಿಗಾವಿ ಶ್ರೀನಿವಾಸ್, ಕುಂಬಳೂರು ವಾಸು, ಕೆ.ಪಿ.ಗಂಗಾಧರ್ ಸೇರಿದಂತೆ ಇನ್ನೂ ಅನೇಕರು ಸಭಿಕರಾಗಿ ಆಗಮಿಸಿದ್ದರು.
ಐರಣಿ ಚಂದ್ರು, ಜಿಗಳಿ ರಂಗನಾಥ್ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಜಗಳೂರಿನ ನಾಗಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.