ರಾಂಪುರ-ಹೆದ್ನೆ ರಸ್ತೆ ಕಾಮಗಾರಿ ಶೀಘ್ರ ಆರಂಭ

ರಸ್ತೆಯಾಗುವವರೆಗೂ ಮದುವೆಯಾಗಲ್ಲ ಎಂದ ಯುವತಿಗೆ  ‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’  ಎಂದು ಭರವಸೆ ನೀಡಿದ ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ, ಸೆ. 16 -ರಾಂಪುರದಿಂದ ಹೆದ್ನೆವರೆಗೆ 2 ಕಿ.ಮೀ. ರಸ್ತೆ ಆಗಿದೆ, ಬಾಕಿ ಉಳಿದಿರುವ ರಸ್ತೆ ಕಾಮಗಾರಿ  ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಗುರುವಾರದಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರಾಂಪುರ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.

ವಾಹನಗಳ ಓಡಾಟಕ್ಕೆ ನಾಳೆಯಿಂದಲೇ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗುವುದು. ಈಗಾಗಲೇ ಒಟ್ಟು ರಸ್ತೆ ನಿರ್ಮಾಣಕ್ಕಾಗಿ 60 ಲಕ್ಷ ರೂ. ಗಳ ಯೋಜನೆ ತಯಾರಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತ ಕೂಡಲೇ,  ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ಹೆದ್ನೆ-ರಾಂಪುರದ ಯುವತಿ ಆರ್.ಡಿ. ಬಿಂದು, ಊರಿಗೆ ರಸ್ತೆ, ವಾಹನ ಸೌಕರ್ಯವಿಲ್ಲದೆ ಮದುವೆಗಳೂ ಆಗದ ಸ್ಥಿತಿ ಇದ್ದು, ಪ್ರತಿಯೊಬ್ಬರೂ ಸವಾಲುಗಳ ಮಧ್ಯೆಯೇ ಬದುಕುತ್ತಿದ್ದಾರೆ.  ಸಾರಿಗೆ ವ್ಯವಸ್ಥೆ ಇಲ್ಲವೆಂಬ ಕಾರಣಕ್ಕೆ ಗ್ರಾಮದ ಅನೇಕ ಹೆಣ್ಣು ಮಕ್ಕಳು, ಗಂಡು ಮಕ್ಕಳ ಮದುವೆಗಳು ನಿಂತುಹೋಗಿವೆ.  ಹೀಗಾಗಿ ತನ್ನೂರಿಗೆ ರಸ್ತೆ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. 

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ರಸ್ತೆ ಕಾಮಗಾರಿ ಪರಿಶೀಲಿಸಿ, ಯುವತಿಯೊಂ ದಿಗೆ ದೂರವಾಣಿಯಲ್ಲಿಯೂ ಮಾತಾಡಿ, `ರಸ್ತೆ ಯನ್ನೂ ಸರಿ ಮಾಡುತ್ತೇವೆ. ನಿಮ್ಮ ಮದುವೆಯನ್ನೂ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪರಮೇ ಶ್ವರಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹದೇವಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. 

error: Content is protected !!