ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಒತ್ತು ನೀಡುತ್ತಿರುವ ಬಿಜೆಪಿ

ಜಗಳೂರು, ಡಿ.5- ಗ್ರಾಮ ಪಂಚಾಯತಿಗಳ ಬಲವರ್ಧನೆಗೆ ನೇರವಾಗಿ ಅನುದಾನ ಒದಗಿಸುವ ಮೂಲಕ ಹೆಚ್ಚಿನ‌ ಶಕ್ತಿ ನೀಡಿದ  ಬಿಜೆಪಿ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿ ಕೆ.ಎಸ್. ನವೀನ್ ಅವರನ್ನು ಗೆಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದರು.

ತಾಲ್ಲೂಕಿನ ಪಲ್ಲಾಗಟ್ಟೆ, ಗುರುಸಿದ್ದಾಪುರ ನಂತರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಬಿಜೆಪಿ ಪಕ್ಷದಿಂದ ನಿನ್ನೆ ಹಮ್ಮಿಕೊಂಡಿದ್ದ ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಅವರ ಪರ ಪ್ರಚಾರ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬರದ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಪರ ಸದಾ ಶ್ರಮಿಸುತ್ತಿರುವ ಶಾಸಕ ಎಸ್.ವಿ. ರಾಮಚಂದ್ರ ಅವರ ಗೌರವ ಇನ್ನೂ ಹೆಚ್ಚಿಸಲು ಬಿಜೆಪಿ ಗೆಲುವು ಅಗತ್ಯವಿದೆ. ಅಲ್ಲದೆ ಸ್ವತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಸ್ಥಳೀಯ ಜನರಿಗೆ ಸ್ಪಂದಿಸುವವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅಭ್ಯರ್ಥಿ ನವೀನ್ ಅವರು ಕಳೆದ ಚುನಾವಣೆಯಲ್ಲಿ 200 ಮತಗಳಿಂದ ಪರಾಭವ ಗೊಂಡರು. ಆದರೆ, 200 ಮತಗಳು ಸಹ ತಿರಸ್ಕೃತವಾಗಿದ್ದವು. ಅದಕ್ಕಾಗಿ ಸೋಲಬೇಕಾ ಯಿತು. ಈ ಬಾರಿ ಅಂತಹ ತಪ್ಪುಗಳನ್ನು ಮಾಡದೆ ಜಾಗೃತಿಯಿಂದ ಮತದಾನ ಮಾಡಬೇಕು ಎಂದರು.

ವಿ.ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ರೈತರ ಖಾತೆಗೆ ಪ್ರತಿ ವರ್ಷ ಹಣ ನೀಡುತ್ತಿದೆ. 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಿಸುತ್ತಿದೆ. 21 ಲಕ್ಷ ವಾರ್ಷಿಕವಾಗಿ ಮನೆಗಳನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಗ್ರಾಮ ಪಂಚಾಯತಿಗೆ ಒಂದು ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ. ನರೇಗಾ ಯೋಜನೆಯಡಿ 250 ರಿಂದ 299 ರೂ. ಕೂಲಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತ ನಾಡಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ 2800 ಕೋಟಿ ಅನುದಾನ‌ ತರಲಾಗಿದೆ, ಅದರಲ್ಲಿ 1200 ಕೋಟಿ ಭದ್ರಾ ಮೇಲ್ದಂಡೆ ಯೋಜನೆ, 220 ಕೋಟಿ ಜಲಜೀವನ್ ಮಿಷನ್, 650 ಕೋಟಿ ಕೆರೆ ನೀರು ತುಂಬಿಸುವ ಯೋಜನೆಗೆ ನೀಡಲಾಗಿದೆ. ಇಷ್ಟೊಂದು ಅನುದಾನ ಬರಲು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕಾರಣ ಎಂದರು.

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೆ.ಎಸ್. ನವೀನ್ ಮಾತನಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ  ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಸಂಸದರ ಪುತ್ರ ಜಿ.ಎಸ್. ಅನಿತ್ ಕುಮಾರ್. ಜಿ.ಪಂ. ಮಾಜಿ ಸದಸ್ಯ ಎಸ್.ಕೆ. ಮಂಜಣ್ಣ, ಹೆಚ್. ನಾಗರಾಜ್, ಮಂಡಲ ಅಧ್ಯಕ್ಷ ಮಹೇಶ್, ಪ.ಪಂ ಅಧ್ಯಕ್ಷ ಎಸ್. ಸಿದ್ದಪ್ಪ, ಉಪಾಧ್ಯಕ್ಷರಾದ ಮಂಜಮ್ಮ, ಡಿ.ವಿ. ನಾಗಪ್ಪ, ಕೃಷ್ಣ ಮೂರ್ತಿ, ಶಿವಕುಮಾರ ಸ್ವಾಮಿ  ಮತ್ತಿತರರು ಉಪಸ್ಥಿತರಿದ್ದರು.

error: Content is protected !!