ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯ ಸಿದ್ಧರಾಮೇಶ್ವರ ವೃತ್ತದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮೇಯರ್ ವೀರೇಶ್
ದಾವಣಗೆರೆ, ಡಿ.5- ನಾವು ಬದುಕಿರುವ ತನಕ ಮಾಡಿದ ಮಾನವೀಯ, ಸಮಾಜಮುಖಿ ಕಾರ್ಯಗಳೇ ನಮ್ಮ ಹೆಸರನ್ನು ಅಜರಾಮರವನ್ನಾಗಿಸಲಿವೆ ಎಂದು ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಪ್ರತಿಪಾದಿಸಿದರು.
ನಗರದ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆಯ ಸಿದ್ಧರಾಮೇಶ್ವರ ವೃತ್ತದಲ್ಲಿ ಸಿದ್ಧರಾಮೇಶ್ವರ ಯುವಕ ಸಂಘ, ಸಿದ್ಧಿ ವಿನಾಯಕ ಯುವಕರ ಸಂಘ, ಮಾರಿಕಾಂಬ ಯುವಕರ ಸಂಘದ ಆಶ್ರಯದಲ್ಲಿ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆ ಹಾಗೂ ಶಿವಕುಮಾರಸ್ವಾಮಿ ಬಡಾವಣೆಯ ನಾಗರಿಕರು, ಅಪ್ಪು ಅಭಿಮಾನಿ ಬಳಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾಪನೆ, ನೇತ್ರದಾನ ಮತ್ತು ರಕ್ತದಾನ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪುನೀತ್ ಅವರು ನಿಧನರಾಗಿ ಒಂದು ತಿಂಗಳ ಮೇಲಾದರೂ ಸಹ ಅವರ ಅಗಲಿಕೆಯ ನೋವು, ಸ್ಮರಣೆ, ನೆನಪು ಮಾತ್ರ ನಿರಂತರವಾಗಿ ಸಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ನೆನಪು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪುನೀತ್ ಅವರು ಬದುಕಿರುವ ತನಕವೂ ಮಾಡಿದ ಸಮಾಜ ಸೇವೆಯೇ ಅವರ ಹೆಸರು ಜನಮಾನಸದಲ್ಲಿ ಅಜರಾಮರವಾಗಿರಲು ಕಾರಣ. ನಮ್ಮ ಜೀವಿತಾವಧಿಯಲ್ಲಿ ನಮ್ಮ ಕೈಲಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ನಾವು ಸಲ್ಲಿಸಿದ ಸೇವೆಗಳೇ ನಮ್ಮ ಉಸಿರು ನಿಂತ ಮೇಲೂ ನಮ್ಮ ಹೆಸರನ್ನು ಉಳಿಸುತ್ತವೆ ಎಂದು ತಿಳಿಸಿದರು.
ಪುನೀತ್ ಅವರು ಮಾಡಿದ ಸಮಾಜ ಸೇವೆಯು ಎಡಗೈಯಿಂದ ಕೊಟ್ಟಿದ್ದು ಬಲಗೈ ಗೊತ್ತಾಗದಂತಿತ್ತು. ತಮ್ಮ ಕುಟುಂಬದವರಿಗೂ ತಿಳಿಯದಂತೆ ಸಮಾಜ ಸೇವೆ ಮಾಡಿದ್ದಾರೆ. ಇಂತಹ ವ್ಯಕ್ತಿ ನಿಜಕ್ಕೂ ನಮಗೆಲ್ಲರಿಗೂ ಆದರ್ಶಪ್ರಾಯ. ಕಾರಣ ನಾವೂ ಸಹ ಅವರಂತೆ ಸಮಾಜ ಸೇವೆ ಮಾಡೋಣ. ಆ ಮುಖೇನ ಅವರಿಗೆ ಗೌರವ, ಅವರು ಮಾಡಿದ ಸೇವೆಯನ್ನು ಮುಂದುವರೆಸೋಣ ಎಂದು ಕರೆ ನೀಡಿದರು.
ಸಮನ್ವಯ ಸಮಿತಿಯ ಮುಪ್ಪಣ್ಣ ಮಾತನಾಡಿ, ಪುನೀತ್ ರಾಜ್ ಕುಮಾರ್ ಅವರ ಹೆಸರು ವಿಶ್ವದೆಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಅವರು ಮಾಡಿದ ಪುಣ್ಯದ ಕಾರ್ಯಗಳು. ಅವರು ಇದ್ದಿದ್ದರೆ ನಮ್ಮ ರಾಜ್ಯದ ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿರಲಿಲ್ಲ ಎಂದರು.
ಸಂಘಟನೆಯ ಸಲಹೆಗಾರ ಹೆಚ್. ತಿಮ್ಮಣ್ಣ ಮಾತನಾಡಿ, ನಟನಾಗಿಯೂ ಪುನೀತ್ ತಮ್ಮ ಶ್ರಮದ ದುಡಿಮೆಯಲ್ಲಿ ಜನಸೇವಾ ಕಾರ್ಯಗಳನ್ನು ಮಾಡಿ ಜನಪ್ರತಿನಿಧಿಗಳು, ರಾಜಕಾರಣಿಗಳಿಗೆ ಆದರ್ಶವಾಗಿದ್ದಾರೆ. ಕೇವಲ ಸಿನಿಮಾ ಹೀರೋ ಆಗದೇ ಜನಸೇವಕರಾಗಿ ಜನರ ಮನಸ್ಸು ಗೆದ್ದು, ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇಂತಹ ಜನನಾಯಕ ಒಮ್ಮೆಯಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಬೇಕಾಗಿತ್ತು ಎಂದರು.
ಇದೇ ವೇಳೆ ಸುಮಾರು 40 ಸಾವಿರ ರೂ.ಗಳ ವೆಚ್ಚದಲ್ಲಿ ಪ್ರತಿಷ್ಠಾಪಿಸಿರುವ ಪುನೀತ್ ಅವರ ಪುತ್ಥಳಿಯನ್ನು ಬಾಡಾ ಕ್ರಾಸ್‌ನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳಿಂದ ಅನಾವರ ಣಗೊಳಿಸಲಾಯಿತು. ಸ್ಥಳೀಯ ಉದ್ಯಾನ ವನಕ್ಕೆ ಪುನೀತ್ ರಾಜ್‌ಕುಮಾರ್ ಹೆಸರನ್ನು ನಾಮಕರಣ ಮಾಡಲಾಯಿತು. ಪುನೀತ್ ಅವರ ನೆನಪಲ್ಲಿ ಸುಮಾರು 60 ಮಂದಿ ರಕ್ತದಾನ ಮಾಡಿದರು. ಅನ್ನ ಸಂತರ್ಪಣೆ ನಡೆಸಲಾಯಿತು. ನಿನ್ನೆ ನಿಧನರಾದ ಹಿರಿಯ ನಟ ಶಿವರಾಂ ಅವರ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಪಾಲಿಕೆ ಮಾಜಿ ಸದಸ್ಯ ಹೆಚ್. ಗುರುರಾಜ್, ಮುಖಂಡರಾದ ಎನ್. ವೀರೇಶ್, ಹೆಚ್.ಎನ್. ರಾಜಪ್ಪ, ಎಲ್‌ಐಸಿ ಹನುಮಂತಪ್ಪ, ಮಾನಸ ಹೆಚ್. ತಿಪ್ಪೇ ಸ್ವಾಮಿ, ಎಸ್.ವಿ. ಈಶ್ವರಪ್ಪ, ಮುತ್ತುರಾಜ, ಲೋಕೇಶಪ್ಪ, ನಾಗರಾಜ್, ಆನಂದಪ್ಪ, ಕೆ.ಪಿ. ನಿರಂಜನ್, ಗುರುಶಾಂತಪ್ಪ, ಎಂ.ಎಸ್. ಬಸವರಾಜಪ್ಪ, ಶ್ರೀನಿವಾಸ್ ಸೇರಿದಂತೆ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.