ಅಡಿಕೆ ಬೆಲೆಗೆ ಶುಕ್ರದೆಸೆ : ವಾಸ್ತವತೆ-ಪರಿಣಾಮ

ಸರ್ ಅಡಿಕೆ ರೇಟು ಎಲ್ಲಿಯವರೆಗೆ ಮುಟ್ಟುವುದು?, ಇವತ್ತಿನ ಅಡಿಕೆ ರೇಟು ಎಷ್ಟು?, ಯಾಕೋ ನಮ್ಮ ತೋಟದ ಎರಡು ಮರದಲ್ಲಿ ಹರಳು ಉದುರುತ್ತಿವೆ ಪರಿಹಾರವೇನು?, ತೋಟದಲ್ಲಿ ಸುಳಿ ರೋಗ, ಹಿಡಿ ಮುಂಡಿಗೆ ಬಂದಿದೆ ಪರಿಹಾರವೇನು?, ಹದಿನೈದು ದಿವಸ ಮುಂಚೆ ಅಡಿಕೆ ಕಟಾವಿಗೆ ಬರಲು ಯಾವುದಾದರೂ ಔಷಧಿ ಇದೆಯಾ?, ಎರಡು ವರ್ಷದ ಅಡಿಕೆ ಗಿಡಗಳು ಮಾರಾಟಕ್ಕೆ ಎಲ್ಲಿ ಲಭ್ಯ? ಬಹುಶಃ ಮೇಲಿನ ಪ್ರಶ್ನೆಗಳು ಏಕೆ ಬಂದಿರುವುದೆಂದು ನೀವು ಊಹಿಸಿಕೊಳ್ಳುತ್ತೀರಾ ಎಂದು ನಂಬಿದ್ದೇನೆ.

ಒಂದು ವಾರದಿಂದ ನೂರಾರು ಕರೆಗಳಿಗೆ ಉತ್ತರ ಕೊಟ್ಟು ರೈತರಿಗೆ ಸಮಾಧಾನಪಡಿಸಲು ನಮ್ಮ ತಾಳ್ಮೆಯನ್ನೆಲ್ಲಾ ಪರೀಕ್ಷೆಗೆ ಇಟ್ಟಂಗಿತ್ತು. ಬಹಳ ವರ್ಷಗಳ ನಂತರ ನಮ್ಮ ಅಡಿಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ. ಸಂತಸ ಅಡಿಕೆಯನ್ನು ಕೂಡಿಟ್ಟ ರೈತರೆಲ್ಲಾದರೆ, ಕಳೆದ ತಿಂಗಳು ಫಸಲನ್ನು ಮಾರಿರುವ ರೈತರು ಕೈ ಕೈ ಹಿಚುಕಿಕೊಳ್ಳುವ ಪರಿಸ್ಥಿತಿಯಾಗಿದೆ. 

ಮೇಲಿನ ಪರಿಸ್ಥಿತಿ ಹೋದ ವರ್ಷದ ಅಡಿಕೆ ಇಟ್ಟ ರೈತರದಾದರೆ, ಈ ವರ್ಷ ಕೇಣಿ ಕೊಟ್ಟಿರುವ ರೈತರ ಪಾಡು ಹೇಳತೀರದು. ಕೆಲ ಮಾಧ್ಯಮಗಳಲ್ಲಿ ಬಂದ ವರದಿಯಂತೆ ಕೆಲವು ಕಡೆ ಕೇಣಿದಾರರೇ ಕೊಯ್ಲು ಮಾಡುವುದನ್ನು ಬಿಟ್ಟಿದ್ದರೆ, ಇನ್ನೂ ಕೆಲವೆಡೆ ರೈತರೇ ಕೇಣಿದಾರರಿಗೆ ಮಾತುಕತೆಗೆ ಬನ್ನಿ ಎಂದಿರುವುದುಂಟು. ಸಮೀಪದ ಗ್ರಾಮವೊಂದರಲ್ಲಿ ಊರ ಮುಖಂಡರೆಲ್ಲಾ ಸೇರಿ ಕೇಣಿದಾರರನ್ನು ಕರೆಸಿ ಮಧ್ಯಸ್ಥಿಕೆ ವಹಿಸಿ ಮರು ವ್ಯವಹಾರವನ್ನು ಮಾಡಿದ್ದುಂಟು. ಇದೇ ಕೆಲಸ ಅಡಿಕೆ ಬೆಲೆ ಪಾತಾಳಕ್ಕೆ ಬಿದ್ದಾಗಲೂ ಮಾಡಿದರೆ ಶಹಬ್ಬಾಸ್ ಎನ್ನಬಹುದು.

ಇನ್ನೂ ಒಣ ಅಡಿಕೆಗೆ ಫಸಲನ್ನು 12-13 ಕೆಜಿಗೆ ಕೇಣಿ ಕೊಟ್ಟಿರುವವರ ಪರಿಸ್ಥಿತಿ ಇನ್ನೂ ವಿಭಿನ್ನ. ಒಪ್ಪಂದದ ಪ್ರಕಾರ ಎಲ್ಲಾ ಹಂತದ ಕೊಯ್ಲು ಮುಗಿದ ನಂತರ ಒಟ್ಟಾರೆ ಒಣ ಅಡಿಕೆಯ ಲೆಕ್ಕಾಚಾರ ನಡೆವುದು ಲೋಕಾರೂಢಿ. ಆದರೆ, ಕೆಲವಡೆ ಈ ಹಂತದಲ್ಲಿರುವ ಒಟ್ಟು ಒಣ ಅಡಿಕೆಯನ್ನು ಮಾರಲು ಕೇಣಿದಾರರಿಗೆ ಒತ್ತಡ ಹಾಕಿದ್ದುಂಟು.

ಹಾಗೆ ಊರ ಕಟ್ಟೆಯ ಮೇಲಿನ ಮಾತಿನ ಕಡೆ ಒಮ್ಮೆ ಗಮನ ಹರಿಸೋಣ, ಅಡಿಕೆ ಬೆಲೆ ಏರಿಕೆಗೆ ಪ್ರಮುಖ ಕಾರಣ ಆಮದು ಸುಂಕ ಏರಿಸಿರುವುದು, ಕಳೆದ ವರ್ಷ ಫಸಲು ಕಡಿಮೆಯಂತೆ, ರೈತರೆಲ್ಲಾ ಅಡಿಕೆ ಕೊಟ್ಟಮೇಲೆ ಬೆಲೆ ಏರುವುದು ಸಹಜ, ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗಿದ್ದಕ್ಕೆ, ಹೀಗೆ ಏನೇನೋ ಊಹಾಪೋಹಗಳು ಹಳ್ಳಿಗಳಲ್ಲಿ ಹರಿದಾಡುತ್ತಿವೆ. ಕೆಲ ರೈತರಂತೂ ಪ್ರತೀ ಮಾರ್ಕೆಟಿನ 12.00 ಗಂಟೆಯ ದರವನ್ನು ವ್ಯಾಟ್ಸಾಪ್ ಗ್ರೂಪ್‍ಗಳಲ್ಲಿ ಶೇರ್ ಮಾಡಿದ್ದೇ ಮಾಡಿದ್ದು. ಒಂದು ಶ್ರಾವಣ ಮಾಸದಲ್ಲಿ ಅಡಿಕೆಗೆ ಶುಕ್ರದೆಸೆ ತಿರುಗಿದ್ದಂತೂ ನಿಜ.

ಇನ್ನೂ ವರ್ಷಕ್ಕೆರೆಡು ಬಾರಿ ಪೋಷಕಾಂಶಗಳನ್ನು ಶಿಫಾರಸ್ಸು ಮಾಡುತ್ತಿದ್ದ ನಮಗೆ ಸೆಪ್ಟೆಂಬರ್ ಮೊದಲ ವಾರದಲ್ಲೇ ಗೊಬ್ಬರದ ಮಾಹಿತಿಗಾಗಿ ಕರೆ ಬರುತ್ತಿರುವುದು ಆಶ್ಚರ್ಯವೆನಿಸುತ್ತಿತ್ತು. ಜನವರಿ-ಫೆಬ್ರವರಿ ತಿಂಗಳಲ್ಲಿ ನಾವು ಅಡಿಕೆ ಇಂಗಾರ ಕೊಳೆ ರೋಗದ ನಿಯಂತ್ರಣಕ್ಕೆ ಸಿಂಪರಣೆಯನ್ನು ಶಿಫಾರಸ್ಸು ಮಾಡುತ್ತಿದ್ದೆವು. ಆ ಹಂತದಲ್ಲಿ ಸಿಂಪರಣೆ ಮಾಡಿದರೆ ಉತ್ತಮ ಫಲಿತಾಂಶ ಬರುತ್ತದೆ. ಈಗ ಯಾರಾದರೂ ತಮಗೆ ಸಿಂಪರಣೆ ಶಿಫಾರಸ್ಸು ಮಾಡಿದರೆ ದಯವಿಟ್ಟು ಹೊಡೆಯಬೇಡಿ. ಏಕೆಂದರೆ ಈ ಹಂತದಲ್ಲಿ ನಾವು ಕಾಯಿ ಗಾತ್ರವನ್ನು, ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. 

ಈ ವರ್ಷ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ತುಂಬಾ ಹೆಚ್ಚಾಗಿದೆ. ಸರಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತೀರ್ಣ ಹಬ್ಬಿದೆ. ಕಳೆದ ಮೂರು ವರ್ಷ ನಮಗೆ ಉತ್ತಮ ಮಳೆಯಾಗಿದೆ. ಮುಂದಿನ ಭವಿಷ್ಯ ನಮಗೆ ಗೊತ್ತಿಲ್ಲ. ಆದರೂ ಇನ್ಮುಂದೆ ವಿಸ್ತೀರ್ಣ ಹೆಚ್ಚಿಸುವುದರ ಬಗ್ಗೆ ರೈತರಿಗೆ ಗಮನವಿರಲಿ. ಮುಂದಿನ 5-6 ವರ್ಷಗಳಲ್ಲಿ ಉತ್ಪಾದನೆ ಹೆಚ್ಚಾದರೆ  ಬೆಲೆಯ ಸ್ಥಿರತೆಯ ಬಗ್ಗೆ ಯಾರೂ ಊಹಿಸಲು ಸಾಧ್ಯವಿಲ್ಲ. ಅಡಿಕೆ ಗಿಡ ಮಾರುವವರಿಗೂ ಸಹ ಈ ವರ್ಷ ಸುಗ್ಗಿ. ಕೊಳ್ಳುವಾಗ ಅಡಿಕೆ ಗೋಟಿನ ಬಗ್ಗೆ ಖಚಿತ ಮಾಹಿತಿಯಿರಲಿ. ಏಕೆಂದರೆ ಕೆಲ ಮಲೆನಾಡಿನ ಬೀಜಗಳು ನಮ್ಮ ಬಯಲು ಸೀಮೆಗೆ ಸೂಕ್ತವಲ್ಲ. ಅನುದಾನಿತ, ಅನುಭವವಿರುವ ರೈತರ ನರ್ಸರಿಗಳಲ್ಲಿ ಗಿಡವನ್ನು ಖರೀದಿಸಿ ಅಥವಾ ತಾವೇ ಗೋಟುಗಳನ್ನು ಖರೀದಿಸಿ ಗಿಡಗಳನ್ನು ಬೆಳೆಸಿಕೊಳ್ಳಿ.

ಇನ್ನೂ ಅಡಿಕೆ ಬೆಳೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ನಮ್ಮಲ್ಲಿ ಅಷ್ಟಕ್ಕಷ್ಟೇ. ಮೌಲ್ಯವರ್ಧನೆ ಮತ್ತು ಸಂಸ್ಕರಣೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ಕಚ್ಛಾ ವಸ್ತುವಿಗೆ ಒಳ್ಳೆಯ ಬೆಲೆ ಬರುವುದರಲ್ಲಿ ಅನುಮಾನವಿಲ್ಲ. ಸರ್ಕಾರ ಈ ಅಂಶದ ಕಡೆ ಹೆಚ್ಚಿನ ಒಲವು ತೋರಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ.

ಬೆಳೆಗಾರರಿಗೆ ಒಂದು ಕಿವಿಮಾತು, ಬೆಲೆ ಎಷ್ಟೇ ಇರಲಿ ನಿಮ್ಮ ಉತ್ಪಾದನಾ ವೆಚ್ಛಕ್ಕಿಂತ ಹೆಚ್ಚಿನ ಲಾಭ ಎಂದೇ ಬರಲಿ ಅಂದು ತಮ್ಮ ಫಸಲನ್ನು ಮಾರಿ. ಏಕೆಂದರೆ ಇದೇ ಸನ್ನಿವೇಶವನ್ನು ಕಳೆದ 5-6 ವರ್ಷಗಳ ಹಿಂದೆ ನೋಡಿದ್ದೇವೆ. ಹಾಗೆಯೇ ಪ್ರತಿ ವರ್ಷ ಅಡಿಕೆ ಬೆಳೆಗೆ ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ. ಬೆಲೆ ಇದ್ದಾಗ ಹಿಗ್ಗಿ, ಬಿದ್ದಾಗ ಕುಗ್ಗುವ ಮನಸ್ಸು ನಮ್ಮ ರೈತರಿಗೆ ಬರದಿರಲಿ ಎಂಬುದು ನಮ್ಮ ಆಶಯ.


– ಎಂ. ಜಿ. ಬಸವನಗೌಡ, ತೋಟಗಾರಿಕೆ ವಿಜ್ಞಾನಿ,  ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ.

error: Content is protected !!