ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಕರೆ
ದಾವಣಗೆರೆ,ಸೆ.13 – ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ಯರು ಹಾಗೂ ಮಕ್ಕಳ ನೆರವಿಗೆ ಧಾವಿಸುವ ಸಹಾಯವಾಣಿ, ಸಾಂತ್ವನ ಕೇಂದ್ರ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ ಸಾಂತ್ವನ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಕಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೌಟುಂಬಿಕ ಕಲಹ, ವರದಕ್ಷಿಣೆ, ಲೈಂಗಿಕ ಕಿರುಕುಳ, ಮಹಿಳೆಯರ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಾನೂನು ಗಳನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗ ಗಳಲ್ಲಿ ಮಹಿಳೆಯರ ನೆರವಿಗೆ ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಸಾಂತ್ವನ, ಮಹಿಳಾ ಸಹಾಯವಾಣಿ ಕೇಂದ್ರಗಳ ಮಾಹಿತಿಯನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಪ್ರತಿಕ್ರಿಯಿಸಿ, ಮಹಿಳೆಯರ ನೆರವಿಗಾಗಿ ಈಗಾಗಲೇ ಕರಪತ್ರ, ಪ್ರದರ್ಶನ ಫಲಕಗಳನ್ನು ಗ್ರಾ.ಪಂ.ಗಳಲ್ಲಿ ನೀಡಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಪ್ರಚಾರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದೇವೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರೆ ಮುಂದಿನ ಕ್ರಮಕ್ಕೆ ಸಾಂತ್ವನ ಕೇಂದ್ರಗಳಿಗೆ ಶಿಫಾರಸು ಮಾಡುತ್ತೇವೆ ಎಂದು ತಿಳಿಸಿದರು.
ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 24, ಚನ್ನಗಿರಿ 68, ಹರಿಹರ 51, ಹೊನ್ನಾಳಿ 26 ಸೇರಿದಂತೆ ಒಟ್ಟು 169 ಮಹಿಳೆಯರು ಕೌಟುಂಬಿಕ ಸಲಹೆ ಪಡೆದುಕೊಂಡಿದ್ದು, ಈ ಪೈಕಿ ಹರಿಹರ ತಾಲ್ಲೂಕಿನ 8 ಮಹಿಳೆಯರಿಗೆ ಆರ್ಥಿಕ ಪರಿಹಾರ ದೊರಕಿದೆ. ಅದರಲ್ಲಿ ಹೊನ್ನಾಳಿಯ ಒಬ್ಬರಿಗೆ ಉದ್ಯೋಗ ಲಭಿಸಿದೆ. ಸಾಂತ್ವನ ಯೋಜನೆಯಡಿ ಒಟ್ಟು 178 ಜನರು ವಿವಿಧ ಸೌಲಭ್ಯ ಅಥವಾ ಪರಿಹಾರವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಮಂಗಳಮುಖಿಯರ ಹಾವಳಿ
ಬಾಡಾ ಕ್ರಾಸ್ ಬಳಿ ಮಂಗಳಮುಖಿಯರ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತ ಶಾಲಾ-ಕಾಲೇಜುಗಳು ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾತ್ರಿಯ ಸಮಯದಲ್ಲಿ ಅವರ ಹಾವಳಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ಪೊಲೀಸ್ ವಾಹನಗಳು ಸಮೀಪಿಸುತ್ತಿದ್ದಂತೆ ತಪ್ಪಿಸಿಕೊಳ್ಳುತ್ತಾರೆ. ಬೀದಿ ದೀಪ ಅಳವಡಿಸಿದರೆ ಅದನ್ನು ಒಡೆದು ಹಾಕುತ್ತಾರೆ. ಅಲ್ಲಿರುವವರು ಬೆಂಗಳೂರಿನಿಂದ ಬಂದಂತಹವರೇ ಹೆಚ್ಚಿರುವುದರಿಂದ ಮಾತು ಕೇಳುತ್ತಿಲ್ಲ. ಈ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ ಕುಮಾರ್ ಮನವಿ ಮಾಡಿದರು.
ಭಿಕ್ಷಾಟನೆ – ಮಾಹಿತಿ ಕಲೆಹಾಕಿ
ನಗರದ ಪ್ರಮುಖ ಸರ್ಕಲ್ಗಳಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಹಲವಾರು ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿರುವುದು ಸಾಮಾನ್ಯವಾಗಿದ್ದು, ಆ ಪುಟ್ಟ ಮಕ್ಕಳ ನೈಜ್ಯ ಪೋಷಕರು ಅವರುಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಹಾಗೂ ಮಕ್ಕಳ ವಿಷಯದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಈ ಮಾಹಿತಿ ಕಲೆ ಹಾಕಬೇಕು ಎಂದು ಜಿ.ಪಂ. ಸಿಇಒ ವಿಜಯ ಮಹಾಂತೇಶ್ ಸೂಚಿಸಿದರು.
ಸಿಇಓ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ನಿಮಿಷಕ್ಕೊಂದು ಅತ್ಯಾಚಾರವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮರ್ಯಾದೆಗೆ ಅಂಜಿ ಪ್ರಕರಣ ಬಯಲು ಮಾಡಲು ಮುಂದೆ ಬರುವುದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಾಗೂ ಅವರಿಗೆ ಇಷ್ಟವಿರದಿದ್ದರೆ ಒತ್ತಾಯಿಸುವುದು ಬೇಡ. ಆದಷ್ಟು ಕಾನೂನಿನ ಕುರಿತು ಜಾಗೃತಿ ಮೂಡಿಸಿ ಎಂದರು.
ಜಿಲ್ಲೆಯಲ್ಲಿ ಅಲೆಮಾರಿ ಜನರು ಹೆಚ್ಚಾಗಿದ್ದು, ಇವರ ಪೈಕಿ ಹೆಚ್ಚಿನ ಜನ ಮಾದಕ ವ್ಯಸನಿಗಳಾಗುತ್ತಿದ್ದು, ಇದರಿಂದ ಇವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಹಾಗೂ ಕೋವಿಡ್ ಪರಿಣಾಮದಿಂದ ಶಾಲೆಗಳಿಲ್ಲದೇ ಯಾರು ಭಿಕ್ಷಾಟನೆ ಮಾಡುತ್ತಿದ್ದಾರೆ, ಯಾರು ಬಾಲ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ಇರಲಿಲ್ಲ. ಆದರೂ ಇಂತಹ ಪ್ರಕರಣಗಳಲ್ಲಿ ಸಿಕ್ಕ ಮಕ್ಕಳ ಪೈಕಿ ಗಂಡು ಮಕ್ಕಳನ್ನು ತುರ್ಚಘಟ್ಟದ ಪುನರ್ವಸತಿ ಕೇಂದ್ರಕ್ಕೆ, ಹೆಣ್ಣು ಮಕ್ಕಳನ್ನು ಚಿತ್ರದುರ್ಗದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. 6 ವರ್ಷದ ಒಳಗಿನ ಅಲೆಮಾರಿ ಮಕ್ಕಳಿಗೆ ಫುಡ್ ಕಿಟ್ ನೀಡಿ, ಅವರನ್ನು ದಾಖಲಾಗಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಡಿಹೆಚ್ಓ ಡಾ.ನಾಗರಾಜ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಟಿ.ಎಂ. ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.