ದಾವಣಗೆರೆ, ಸೆ.13- ಕುಂದುವಾಡ ಕೆರೆ ಸುತ್ತಲಿನ 30 ಮೀ. ಬಫರ್ ಝೋನ್ ವ್ಯಾಪ್ತಿಗೆ ಒಳಪಡುವ ಭಾಗದಲ್ಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಹದ್ದುಬಸ್ತು ಮಾಡುವಂತೆ ಯುವ ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಸುರ್ವೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರಕ್ಕೆ ನೀರು ಪೂರೈಸುವ ಈ ಕೆರೆ ಒತ್ತುವರಿಯಾಗಿದ್ದು, ಅದನ್ನು ಮರುಪಡೆಯಲು ದಾಖಲೆಗಳನ್ನು ಸಂಗ್ರ ಹಿಸಿ ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಕೆರೆಯ ಅಭಿವೃದ್ಧಿ ನೆಪದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಒಳ ಭಾಗದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆ ಮಾಡುತ್ತಿರುವುದರ ವಿರುದ್ಧ ಸಂಘಟನೆ ಕಾನೂನು ಹೋರಾಟ ನಡೆಸಿತ್ತು. ನಮ್ಮ ಮನವಿ ಪರಿಗಣಿಸಿದ ನ್ಯಾಯಾಲಯ ವು ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ಆಯುಕ್ತರು ಅಫಿಡೆವಿಟ್ ಸಲ್ಲಿಸಲು ಸೂಚಿಸಿದ್ದರನ್ವಯ ಕೆರೆಯ ಏರಿ ಎತ್ತರ ಹೆಚ್ಚಿಸಿ ನೀರಿನ ಸಂಗ್ರಹಣೆ ಹೆಚ್ಚಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೆರೆಯಲ್ಲ ಟ್ಯಾಂಕ್ ಎಂದು ಮಂಡಿಸಿದ್ದ ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯ ವಾದವನ್ನೂ ತಿರಸ್ಕರಿಸಿದ ನ್ಯಾಯಾಲಯವು ಇದು ಕೆರೆ ಎಂದು ಸ್ಪಷ್ಟಪಡಿಸಿದೆ. ಕೆರೆ ಸುತ್ತಲಿನ 30 ಮೀಟರ್ ಬಫರ್ ಝೋನ್ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಸೈಕಲ್ ಟ್ರಾಕ್ ಮಾಡಲು ಮೀಸಲಿಟ್ಟ ಅಂದಾಜು 3-4 ಕೋಟಿ ರೂ. ಹಣ ಸರ್ಕಾರದ ಬೊಕ್ಕಸಕ್ಕೆ ಉಳಿದಿದೆ ಎಂದರು.
ಕುಂದುವಾಡ ಕೆೆರೆ ಏರಿ ಮೇಲೆ ನಿರ್ಮಿಸಲುದ್ದೇಶಿಸಿರುವ ಸೈಕಲ್ ಟ್ರಾಕ್ ತೆಗೆಸುವ ಉದ್ದೇಶದಿಂದಲೇ ಹೋರಾಟ ನಡೆಸಿದ್ದು, ಇದೀಗ ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಸೈಕಲ್ ಟ್ರ್ಯಾಕ್ ನಿರ್ಮಾಣದಿಂದ ಹಿಂದೆ ಸರಿದಿ ದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜು ನಾಥ್, ಪ್ರಸನ್ನ ಬೆಳಕೆರೆ, ಎಸ್.ಕುಮಾರ್ ಉಪಸ್ಥಿತರಿದ್ದರು.