ಪರಿಶಿಷ್ಟ ಜಾತಿ – ಪಂಗಡಗಳ 150 ಸಮುದಾಯಗಳು ಒಂದಾಗಲು ಎಸ್‌ಸಿ – ಎಸ್‌ಟಿ ಒಕ್ಕೂಟದ ವೇದಿಕೆಯಲ್ಲಿ ಕರೆ
ದಾವಣಗೆರೆ, ಸೆ. 12 – ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಜೊತೆಯಾದರೆ ರಾಜ್ಯವಷ್ಟೇ ಅಲ್ಲ ದೇಶವನ್ನೇ ಬದಲಿಸುವ ಶಕ್ತಿ ಹೊಂದುತ್ತಾರೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ನಗರದ ಸಾಯಿಬಾಬಾ ಸಮುದಾಯ ಮಂದಿರದಲ್ಲಿ ಸ್ವಾಭಿಮಾನಿ ಎಸ್.ಸಿ. – ಎಸ್.ಟಿ. ಒಕ್ಕೂಟಗಳ ವತಿಯಿಂದ §ಎಸ್.ಸಿ. – ಎಸ್.ಟಿ. ಸಮುದಾಯಗಳು ಏಕೆ ಒಂದಾಗಬೇಕು?’ ಎಂಬ ವಿಷಯ ಕುರಿತು ಕರೆಯಲಾಗಿದ್ದ ಎಸ್.ಸಿ. – ಎಸ್.ಟಿ. ಸ್ವಾಮೀಜಿಗಳ ನೇತೃತ್ವದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬೇರೆ ಪಕ್ಷದಿಂದ ಬಂದ ಹದಿಮೂರು ಶಾಸಕರು ಸೇರಿಕೊಂಡು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 36 ಹಾಗೂ ಪರಿಶಿಷ್ಟ ಪಂಗಡದ 16 ಶಾಸಕರಿದ್ದರೂ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ. ಏಕೆ ಹೀಗಾಗಿದೆ? ಎಂಬ ಬಗ್ಗೆ ಯೋಚಿಸಬೇಕಿದೆ ಎಂದವರು ಹೇಳಿದರು.
ಪರಿಶಿಷ್ಟ ರಾಜಕಾರಣಿಗಳು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಗೆಲ್ಲಲು ಬೇರೆಯವರನ್ನು ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದವರು ಒಂದಾದರೆ, ಸಾಮಾನ್ಯ ಕ್ಷೇತ್ರಗಳ ರಾಜಕಾರಣಿಗಳು ನಮ್ಮ ಮಠಗಳ ಎದುರು ಬಂದು ನಿಲ್ಲುತ್ತಾರೆ ಎಂದು ಶ್ರೀಗಳು ಹೇಳಿದರು.
ಲಿಂಗಾಯತರು ರಾಜ್ಯದಲ್ಲಿ 14 ಬಾರಿ, ಒಕ್ಕಲಿಗರು 10 ಬಾರಿ, ಹಿಂದುಳಿದ ವರ್ಗದವರು ಐದು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಬ್ರಾಹ್ಮಣರು ಮೂರು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಶೇ.30ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಒಮ್ಮೆಯೂ ಮುಖ್ಯಮಂತ್ರಿ ಆಗಿಲ್ಲ. ಇದು ಪರಿಶಿಷ್ಟ ಸಮುದಾಯ ಒಂದಾಗಬೇಕಾದ ಅಗತ್ಯತೆ ತೋರಿಸುತ್ತದೆ.
– ದಲಿತ ಮುಖಂಡ ಮುನಿಸಂದ್ರ ಮಾರಪ್ಪ
ಸದಾಶಿವ ಆಯೋಗದ ವರದಿ ಹಿನ್ನೆಲೆಯಲ್ಲಿ, ಪರಿಶಿಷ್ಟರಲ್ಲಿ ಸಂಘರ್ಷ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ವರದಿ ಬೇಕು ಎಂದು ಮಾದಾರ ಚನ್ನಯ್ಯ ಸ್ವಾಮೀಜಿ, ಬೇಡ ಎಂದು ನಾನು ಹೋರಾಟ ಮಾಡುತ್ತಿದ್ದರೂ, ನಾವಿಬ್ಬರೂ ಜೊತೆಯಾಗಿ ಊಟ ಮಾಡುತ್ತೇವೆ. ಸಮಾಜಕ್ಕೋಸ್ಕರ ನಮ್ಮ ನಮ್ಮ ಆದ್ಯತೆ ಬೇರೆ, ಸಮಷ್ಠಿಯನ್ನು ಒಂದುಗೂಡಿಸುವ ವಿಚಾರ ಬೇರೆ.
– ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಪರಿಶಿಷ್ಟರು ಒಂದಾದರೆ ಉಳಿಯುತ್ತೇವೆ. ದಾವಣಗೆರೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುವುದು.
– ಮೈಸೂರಿನ ಗುರು ಪೆದ್ದಲಿಂಗ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ
Click here to change this text
ಈ ಹೋರಾಟದಲ್ಲಿ ವೈಯಕ್ತಿಕ ಅಜೆಂಡಾ ಬೇಡ. ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳು ತಮ್ಮ ತಮ್ಮ ವೈಯಕ್ತಿಕ ಸಮುದಾಯದ ವಿಷಯಗಳನ್ನೂ ಈ ವೇದಿಕೆಯಲ್ಲಿ ಚರ್ಚೆಗೆ ತರಬಾರದು. ಇಲ್ಲಿ ಪರಿಶಿಷ್ಟರು ಒಂದಾಗಲು ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮುನಿಸಂದ್ರ ಮಾರಪ್ಪ ಮಾತನಾಡಿ, ಖಾಸಗೀಕರಣದಿದಾಗಿ ಮೀಸಲಾತಿ ಇದ್ದರೂ ಪರಿಶಿಷ್ಟರಿಗೆ ಸ್ಥಾನಗಳು ಸಿಗುತ್ತಿಲ್ಲ. ಆರ್ಥಿಕವಾಗಿ ಮೇಲ್ಜಾತಿಯವರೇ ಬಲಾಢ್ಯರಾಗಿದ್ದಾರೆ. ಜಮೀನಿನ ಹಕ್ಕು ಹಾಗೂ ವಸತಿ ಹಕ್ಕಿನಿಂದಲೂ ವಂಚಿತರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ಸಮಾವೇಶದ ವೇದಿಕೆಯ ಮೇಲೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಸೂರಿನ ಗುರು ಪೆದ್ದಲಿಂಗ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗ ಚಲವಾದಿ ಗುರುಪೀಠದ ಬಸವ ಶ್ರೀ ನಾಗಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸಂತ ಸೇವಾಲಾಲ್ ಸ್ವಾಮೀಜಿ, ಚಿತ್ರದುರ್ಗ ಕೇತೇಶ್ವರ ಮಠದ ಶ್ರೀ ಬಸವ ಕೇತೇಶ್ವರ ಸ್ವಾಮೀಜಿ, ಮೈಸೂರಿನ ಶ್ರೀ ಶಿವಲಿಂಗ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ದಲಿತ ಮುಖಂಡರಾದ ಗೋಪಿನಾಥ್, ಮಾವಳ್ಳಿ ಶಂಕರ್, ಬಸವರಾಜ ನಾಯಕ, ಬಿ. ಮೂರ್ತಿ, ಯಶೋದಮ್ಮ, ಅನಂತ ನಾಯ್ಕ, ಆದರ್ಶ, ಎಲ್ಲಪ್ಪ, ಕಿರಣ್ ಕುಮಾರ್, ಶಿವಮೊಗ್ಗದ ಗುರುಮೂರ್ತಿ, ಡಾ. ವೈ.ರಾಮಪ್ಪ, ಪ್ರೊ. ಎ.ಬಿ. ರಾಮಚಂದ್ರಪ್ಪ, ಬಿ. ವೀರಣ್ಣ, ಹೊದಿಗೆರೆ ರಮೇಶ್, ಎಸ್.ಕೆ. ಬಸವಂತಪ್ಪ, ಮಾಯಕೊಂಡ ಆನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.