ಕಾಂಗ್ರೆಸ್‌ನವರು ಹಣ ಇದೆ ಎಂದು ಬೆಂಗಳೂರಿನ ವ್ಯಕ್ತಿ ಕಣಕ್ಕಿಳಿಸಿದ್ದಾರೆ

ಕಾಂಗ್ರೆಸ್‌ನವರು ಹಣ ಇದೆ ಎಂದು ಬೆಂಗಳೂರಿನ ವ್ಯಕ್ತಿ ಕಣಕ್ಕಿಳಿಸಿದ್ದಾರೆ - Janathavaniಪರಿಷತ್ ಚುನಾವಣೆಗೆ ಕಾಂಗ್ರೆಸ್‌ಗೆ ದಾವಣಗೆರೆ-ಹರಿಹರದಲ್ಲಿ ಗಂಡಸರು ಇಲ್ಲವೇ ?

ದಾವಣಗೆರೆ, ಡಿ. 3 – ಚಿತ್ರದುರ್ಗ – ದಾವಣಗೆರೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯು ಸರಳ, ನಿಷ್ಠಾವಂತ ಹಾಗೂ ಸಜ್ಜನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ, ಕಾಂಗ್ರೆಸ್‌ನವರು ಹಣ ಇದೆ ಎಂದು ಬೆಂಗಳೂರಿನ ವ್ಯಕ್ತಿಯನ್ನು ಕಣಕ್ಕಿಳಿಸಿದೆ. ಈ ಭಾಗದಲ್ಲಿ ಅವರಿಗೆ ಗಂಡಸರು ಇಲ್ಲವೇ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಪ್ರಶ್ನಿಸಿದ್ದಾರೆ.

ಬಿಜೆಪಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮತದಾರರು ಸ್ವಾಭಿಮಾನಿಗಳಾಗಿದ್ದಾರೆ. ಹಣಕ್ಕಾಗಿ ಮತಗಳನ್ನು ಮಾರಿಕೊಳ್ಳುವುದಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಗೆಲ್ಲಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

§ಕಾಂಗ್ರೆಸ್‌ಗೆ ದಾವಣಗೆರೆ – ಚಿತ್ರದುರ್ಗದಲ್ಲಿ ಗಂಡಸರು ಸಿಗಲಿಲ್ಲವೇ’? ಎಂಬ ಹೇಳಿಕೆಗೆ ಸಂಬಂಧಿಸಿದಂತೆ,  ಚಿತ್ರದುರ್ಗದಲ್ಲಿ ಬಿಜೆಪಿ ಹೊರಗಿನವರನ್ನು ಸಂಸದ ಸ್ಥಾನಕ್ಕೆ ನಿಲ್ಲಿಸಿದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರೇ ಹೊರಗಿನ ವ್ಯಕ್ತಿಯನ್ನು ಗೆಲ್ಲಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗ್ರಾ.ಪಂ. ಸದಸ್ಯರ ಗೌರವ ಧನ ಹೆಚ್ಚಿಸಿದೆ, ಗೌರವ ಧನವನ್ನು 3,000 ರೂ.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಸಲ್ಲಿಸಲಾಗಿದೆ. ಪಂಚಾಯ್ತಿ ಅಧ್ಯಕ್ಷರಿಗೆ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರ ನೀಡಲಾಗಿದೆ. ಪಂಚಾಯ್ತಿಗಳಿಗೆ ಬರುತ್ತಿದ್ದ ಹಣವನ್ನು 80 ಲಕ್ಷ ರೂ.ಗಳವರೆಗೆ ಹೆಚ್ಚಿಸಲಾಗಿದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ವಲ್ಪ ಮತಗಳ ಅಂತರದಲ್ಲೇ ಸೋತಿದ್ದರು. ಈ ಬಾರಿ 3,500ಕ್ಕೂ ಹೆಚ್ಚು ಮತ ಪಡೆದು ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ಹಣ ಕೊಡಲಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಿಜೆಪಿಯಿಂದ ಹಣ ಕೊಟ್ಟು ಮತ ಕೇಳುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಕೆಲಸಕ್ಕಾಗಿ ಎಲ್ಲ ಮತದಾರರ ಮನವೊಲಿಸಿ, ಗೆಲುವು ಸಾಧಿಸುತ್ತೇವೆ ಎಂದವರು ಹೇಳಿದರು.

ಅಭ್ಯರ್ಥಿ ಕೆ.ಎಸ್. ನವೀನ್ ಮಾತನಾಡಿ, ಈ ಚುನಾವಣೆ ಹಣದ ಮೇಲೆ ನಡೆಯುವಂಥದ್ದಲ್ಲ. ಪಕ್ಷ ನಿರಂತರವಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಪರ್ಕದಲ್ಲಿದೆ. ಉತ್ತಮ ಕೆಲಸ ಮಾಡುವ ಹುಮ್ಮಸ್ಸು ಸದಸ್ಯರಲ್ಲಿದ್ದು, ಈ ಬಾರಿ ತಮ್ಮನ್ನೇ ಗೆಲ್ಲಿಸುವ ವಿಶ್ವಾಸ ಇದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಪ್ರೊ. ಲಿಂಗಣ್ಣ, ಎಸ್.ವಿ ರಾಮಚಂದ್ರ, ಪರಿಷತ್ ಸದಸ್ಯ ರವಿಕುಮಾರ್, ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಬಿಜೆಪಿ ಪ್ರಕೋಷ್ಠಗಳ ಸಹ ಸಂಚಾಲಕ ಡಾ. ಎ.ಎಸ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯ್ಕ, ಬಿಜೆಪಿ ಮುಖಂಡರಾದ ಬಿ.ಎಸ್. ಜಗದೀಶ್, ಶಿವರಾಜ ಪಾಟೀಲ್, ಡಿ.ಎಸ್. ಶಿವಶಂಕರ್, ಹೆಚ್.ಪಿ. ವಿಶ್ವಾಸ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!