ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಗೆ ಖಂಡನೆ

ವೈದ್ಯರು – ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ದಾವಣಗೆರೆ, ಡಿ.3- ನಗರದ ಬಾಪೂಜಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮೃತಪಟ್ಟ ಮಗುವಿನ ಸಂಬಂಧಿಕರು ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ, ಬಾಪೂಜಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. ನಂತರ ಎಸ್ಪಿ ಸಿ.ಬಿ. ರಿಷ್ಯಂತ್ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಒಂದು ವಾರದಿಂದ ತಲೆನೋವು ಮತ್ತು ಪಿಟ್ಸ್‍ನಿಂದ ಬಳಲುತ್ತಿದ್ದ ಮಗುವನ್ನು ನಿನ್ನೆ ಸಂಜೆ ಬಾಪೂಜಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲಿಸಿದ್ದರು. ಆದರೆ, ವೈದ್ಯರು ನೀಡಿದ ಚಿಕಿತ್ಸೆಗೆ ಮಗು ಸ್ಪಂದಿಸದೆ ಮೃತಪಟ್ಟಿದೆ. ಹೀಗಿದ್ದರೂ ಮಗುವಿನ ಸಂಬಂಧಿಕರು ವಾಸ್ತವ ಪರಿಸ್ಥಿತಿಯನ್ನು ಅರಿಯದೆ ಕರ್ತವ್ಯ ನಿರತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸರ ಕಡೆಯವರು ಎಂದು ಹೇಳಿ ಕೊಂಡು ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲ್ಲೆಯ ವೇಳೆ ವೈದ್ಯರ ರಕ್ಷಣೆಗೆ ಬಾರದೆ ಮೂಕ ಪ್ರೇಕ್ಷಕರಂತೆ ನಿಂತಿದ್ದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈದ್ಯ ರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್, ಡಾ. ರಾಹುಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..

error: Content is protected !!