ಕೃಷಿ ಕಾಯ್ದೆ ರದ್ದು: ಟೋಪಿ ತೆಗೆದು ವಿಜಯೋತ್ಸವ

ದಾವಣಗೆರೆ, ಡಿ.3- ಮೂರು ಕೃಷಿ ಕಾಯ್ದೆಗಳ ರದ್ಧತಿ ಅಂಗಿಕಾರ ಹಾಗೂ ರೈತ ಪರ ಹೋರಾಟಕ್ಕೆ ಬೆಂಬಲವಾಗಿ ಧರಿಸಿದ ಟೋಪಿ ಗಳನ್ನು ತೆಗೆದು ರೈತ ಪರ ಹೋರಾಟಗಾರರು, ರೈತ ಸಂಘಟನೆ ಮುಖಂಡರು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು ವಿಜಯೋತ್ಸವ ಆಚರಿಸಿದರು. 

ಡಾ. ಬಿ.ಆರ್. ಅಂಬೇಡ್ಕರ್‍ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹುತಾತ್ಮ ರೈತರಿಗೆ ಮೌನಾಚರಿಸಿ, ನಂತರ ಮೂರು ಕೃಷಿ ಕಾಯ್ದೆಗಳ ರದ್ಧತಿ ವಿಧೇಯಕ ಅಂಗೀಕಾರವಾದ ಬಗ್ಗೆ ಹಾಗೂ ಹೋರಾಟಕ್ಕೆ ಬೆಂಬಲವಾಗಿ ಧರಿಸಿದ ಟೋಪಿಗಳನ್ನು ರೈತ ಮುಖಂಡ ತೇಜಸ್ವಿ ಪಟೇಲ್, ಚಿಂತಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮತ್ತು ಮುಮ್ತಾಜ್ ಬೇಗಂ ಹಾಗೂ ಜಬೀನ ಖಾನಂ ಹಿಂಪಡೆದರು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ವಕೀಲ ಅನೀಸ್ ಪಾಷ, ಕಳೆದ ಫೆ.20ರಂದು ಸಾಮಾ ಜಿಕ ನ್ಯಾಯದ ದಿನ ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ಬೆಂಬಲವಾಗಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಕಿಸಾನ್ ಮೋರ್ಚಾ ಸಂಘಟನೆಯ ಸಂಕೇತ ವಾದ ಹಸಿರು ಬಿಳಿ ಟೋಪಿಯನ್ನು ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ನಾಗಮೋಹನ್‍ದಾಸ್ ಅವರ ಕೈಯ್ಯಾರೆ ನಾನು ಮತ್ತು ಜನಶಕ್ತಿಯ ಸತೀಶ್ ಅರವಿಂದ್, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್ ಧಾರಣೆ ಮಾಡಿದ್ದು, ಅಂದಿನಿಂದ ನಿರಂತರವಾಗಿ ಈವರೆಗೂ ಅಂದರೆ ಸುಮಾರು 286 ದಿನ ಟೋಪಿಯನ್ನು ಧರಿಸಿ, ರೈತ ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಾಯಿತು. ರೈತರ ಹೋರಾಟದ ಫಲವಾಗಿ ಮೂರು ಕಾಯ್ದೆಗಳನ್ನು ಸಂಸತ್ತಿನಲ್ಲಿ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ರೈತ ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಒದಗಿಸ ಬೇಕು, ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಜಾರಿ ಮಾಡಬೇಕು, ರೈತ ಹೋರಾಟದಲ್ಲಿ ಭಾಗಿಯಾದ ರೈತರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಿಜಯೋತ್ಸವದಲ್ಲಿ ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಹುಚ್ಚವ್ವಹಳ್ಳಿ ಮಂಜುನಾಥ್, ಅರುಣ್ ಕುಮಾರ್ ಕುರುಡಿ, ಕತ್ತಲಗೆರೆ ತಿಪ್ಪಣ್ಣ, ಬಾಷಾ ಸಾಬ್, ಆವರೆಗೆರೆ ಚಂದ್ರು, ಹೆಚ್. ಮಲ್ಲೇಶ್, ರೇಣುಕಾ ಯಲ್ಲಮ್ಮ, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಘನಿ ತಾಹೀರ್, ಹಯಾತ್, ವಕೀಲರಾದ ರುದ್ರೇಶ್, ಅಬ್ದುಲ್ ಸಮದ್, ಖಲೀಲ್, ನೌಷಾದ್, ಮುಜಾಹಿದ್, ನಿಜಾಮುದ್ದೀನ್, ರಹಮತ್, ಮುಸ್ತಫಾ, ಯಲ್ಲಪ್ಪ, ಅಂಜಿನಪ್ಪ, ರವಿ ಕುಮಾರ್, ಬಸವರಾಜ್ ಹಾಗೂ ಇತ್ತತರರಿದ್ದರು.

error: Content is protected !!