ಜಗಳೂರಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಾಲ್ಮೀಕಿ ಭವನ

ಜಗಳೂರು, ಸೆ.12- ಪಟ್ಟಣದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಎರಡನೇ ಸುಸಜ್ಜಿತವಾದ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದ್ದು, ಎಲ್ಲಾ ವರ್ಗದವರಿಗೂ ಅನುಕೂಲವಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದ್ದಾರೆ. 

ಪಟ್ಟಣದ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಯನ್ನು ಇಂದು ಪರಿಶೀಲಿಸಿ ಮಾತನಾಡಿದ ಅವರು, ನೂತನ ವಾಲ್ಮೀಕಿ ಭವನ 12 ಕೊಠಡಿಗಳನ್ನು ಹೊಂದಿದ್ದು, ಸುಮಾರು 1 ಸಾವಿರ ಜನ ಸಾಮರ್ಥ್ಯದ ಸಭಾಂಗಣ ಹಾಗೂ 400 ಜನರ ಊಟದ ಸಭಾಂಗಣ ನಿರ್ಮಾಣವಾಗುತ್ತಿದೆ. ಇದು ತಾಲ್ಲೂಕಿನಲ್ಲಿಯೇ ದೊಡ್ಡ ಭವನವಾಗಿರಲಿದೆ. ಬಡ, ಹಿಂದುಳಿದ ವರ್ಗದವರಿಗೆ ರಿಯಾಯಿತಿಯಲ್ಲಿ ಮದುವೆ, ಶುಭ ಸಮಾರಂಭಗಳಿಗೆ ಸಹಕಾರಿಯಾಗಲಿದೆ ಎಂದರು. 

57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಪೈಪ್‍ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರವೇ ಸಾಂಕೇ ತಿಕವಾಗಿ ಕೆರೆಗಳಿಗೆ ನೀರು ತುಂಬಿಸಿ ಉದ್ಘಾಟಿಸಲಾಗುವು ದು. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಗೆ ಸೇರ್ಪಡೆಯಿಂದ ತಾಲ್ಲೂಕಿಗೆ 1200 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಇದರಿಂದ 47 ಸಾವಿರ ಎಕರೆ ಪ್ರದೇಶ ನೀರಾವರಿಯಾಗಲಿದೆ ಎಂದರು. 

ಪಟ್ಟಣದ ಹೃದಯ ಭಾಗವಾದ ಸರ್ಕಾರಿ ಬಾಲಕರ ಶಾಲಾ ಆವರಣದಲ್ಲಿ ಸಾರ್ವಜನಿಕರಿಗಾಗಿ ರಂಗ ಮಂದಿರ, ಆಡಿಟೋರಿಯಂ ನಿರ್ಮಾಣ ಹಂತದಲ್ಲಿದೆ. ಪಟ್ಟಣ ಪಂಚಾಯಿತಿಯಿಂದ ಪ್ರಮುಖ ರಸ್ತೆಗಳ ಅಗಲೀಕರಣ ಮತ್ತು ವಿದ್ಯುತ್ ದೀಪ ಅಳವಡಿಸಲಾಗಿದೆ. ಯುವ ಜನರ ಬೇಡಿಕೆಯಂತೆ ಪಟ್ಟಣದ ಹೊರ ವಲಯದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಡಿಪೋ ನಿರ್ಮಾಣಕ್ಕೆ ಈಗಾಗಲೇ ಅಧಿಕಾರಿಗಳಿಗೆ ಜಾಗ ಹಸ್ತಾಂತರಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಜಿ.ಪಂ. ಮಾಜಿ ಸದಸ್ಯ ಹೆಚ್. ನಾಗರಾಜ್, ಪ.ಪಂ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಸದಸ್ಯರುಗಳಾದ ಪಾಪಲಿಂಗಪ್ಪ, ನವೀನ್, ನಾಮನಿರ್ದೇಶಿತ ಸದಸ್ಯ ಬಿ.ಪಿ.ಸುಭಾನ್, ಮುಖಂಡರಾದ ರಮೇಶ್, ಬಿಜೆಪಿ ಒಬಿಸಿ ಯುವ ಘಟಕದ ಅಧ್ಯಕ್ಷ ಇಂದ್ರೇಶ್, ಮುಖಂಡ ಓಬಣ್ಣ,  ನಿಂಗಣ್ಣ, ಮಲ್ಲಿಕಾರ್ಜುನ್,  ನಾಗರಾಜ್, ಕಾನನಕಟ್ಟೆ ಪ್ರಭು ಮುಂತಾದವರು ಉಪಸ್ಥಿತರಿದ್ದರು.

error: Content is protected !!