ಜಿಲ್ಲೆಯಲ್ಲಿ ನೆರವೇರಿದ ನೀಟ್‌ ಪರೀಕ್ಷೆ

ಪರೀಕ್ಷೆಗೆ ಬಂದವರ ಕಾರುಗಳಿಂದ ಟ್ರಾಫಿಕ್ ಜಾಮ್‌

ದಾವಣಗೆರೆ, ಸೆ. 12 – ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ವೈದ್ಯಕೀಯ ಪ್ರವೇಶಕ್ಕೆ ನಡೆಲಾಗುವ ನೀಟ್ ಯು.ಜಿ. – 2021 ಪರೀಕ್ಷೆ ನೆರವೇರಿತು.

ಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರಗಳ ಸುತ್ತ ಬಿಗಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಪರೀಕ್ಷೆಗಾಗಿ ಬೇರೆ ಬೇರೆ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು.

ಮಧ್ಯಾಹ್ನ 2ರಿಂದ 5ರವರೆಗೆ ಪರೀಕ್ಷೆ ನಡೆಸಲಾಗಿತ್ತಾದರೂ, ಅದಕ್ಕೂ ಸಾಕಷ್ಟು ಮುಂಚೆ ವಿದ್ಯಾರ್ಥಿಗಳು ಬಂದಿದ್ದರು. 

ಪರೀಕ್ಷೆಗೆ ಆಗಮಿಸುವವರಿಗೆ ಹಲವಾರು ಸೂಚನೆಗಳನ್ನು ಮೊದಲೇ ನೀಡಲಾಗಿತ್ತಾದರೂ, ಕೆಲವರು ನಿಯಮ ಮೀರಿ ಕಿವಿಗೆ ರಿಂಗ್, ಬಳೆ, ಉದ್ದನೆ ತೋಳಿನ ಅಂಗಿ ಇತ್ಯಾದಿಗಳನ್ನು ಹಾಕಿಕೊಂಡು ಬಂದಿದ್ದರು. ಪರೀಕ್ಷಾ ಕೇಂದ್ರದ ಸಿಬ್ಬಂದಿ ಅವರಿಗೆ ಈ ಬಗ್ಗೆ ತಿಳಿಸಿ, ರಿಂಗ್ ಇತ್ಯಾದಿಗಳನ್ನು ಬಿಚ್ಚಿಸಿದರು.

ದೂರದ ಊರಿಂದ ಸಾಕಷ್ಟು ಜನರು ಕಾರಿನಲ್ಲಿ ಬಂದಿದ್ದರು. ಇದರಿಂದಾಗಿ ನಗರದ ಸ್ಟೇಡಿಯಂ ಬಳಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ನಡುವೆ ಆಂಬ್ಯುಲೆನ್ಸ್ ಒಂದು ಸಿಲುಕಿಕೊಂಡಿದ್ದೂ ಕಂಡು ಬಂತು.

ಹೊರ ಊರಿನಿಂದ ಬಂದಿದ್ದವರು ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿಯಲು ಹೋಟೆಲ್‌ಗಳಿಗೆ ಲಗ್ಗೆ ಹಾಕಿದ್ದ ರಿಂದ, ಬೆಳಿಗ್ಗೆಯಿಂದಲೇ ದೋಸೆ ಹೋಟೆಲ್‌ಗಳು ಬ್ಯುಸಿ ಆಗಿದ್ದು ಕಂಡು ಬಂತು. 

ಒಟ್ಟಾರೆ ಈ ಬಾರಿಯ ನೀಟ್ ಪ್ರಶ್ನೆ ಪತ್ರಿಕೆ ಸರಳವಾಗಿದ್ದವು. ಆದರೆ, ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರದ ಪ್ರಶ್ನೆಗಳು ತುಸು ದೀರ್ಘವಾಗಿದ್ದವು. ಭೌತ ಶಾಸ್ತ್ರದ ಪ್ರಶ್ನೆಪತ್ರಿಕೆ ಉಳಿದವುಗಳಿಗಿಂತ ಕಠಿಣವಾಗಿದ್ದರೆ, ಜೀವಶಾಸ್ತ್ರದ್ದು ಸರಳವಾಗಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ.

error: Content is protected !!