ರಥವೆಳೆದ ಮಹಿಳೆಯರು
ಶ್ರೀ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಸಾಗಿತು. ಶ್ರೀ ಕ್ಷೇತ್ರ ಯರಗುಂಟೆಯ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ಕಳೆದ 11 ವರ್ಷಗಳಿಂದ ಕರಿಬಸವೇಶ್ವರರ ಆಶಯದಂತೆ ನಡೆದುಕೊಂಡು ಬಂದ ಪದ್ಧತಿಯ ಅನುಸಾರ ಇಂದೂ ಸಹ ನೆರೆದಿದ್ದ ನೂರಾರು ಮಹಿಳೆಯರು ಶ್ರದ್ಧಾ – ಭಕ್ತಿಯಿಂದ ಪೂಜೆ ಸಲ್ಲಿಸಿ, ಸ್ವಾಮಿಯ ಹೂವಿನ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು. ಇದಕ್ಕೂ ಮುನ್ನ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ದುರ್ಗಾ ಹೋಮ, ಗೋ ಪೂಜೆ ನೆರವೇರಿಸಲಾಯಿತು.
2028ರ ಇಸವಿಯಲ್ಲಿ ಮಹಿಳಾ ಮುಖ್ಯಮಂತ್ರಿ ಸಾಧ್ಯತೆ : ಪರಮೇಶ್ವರ ಶ್ರೀ ಭವಿಷ್ಯ
ದಾವಣಗೆರೆ, ಡಿ.2- ಕರ್ನಾಟಕ ರಾಜ್ಯದಲ್ಲಿ 2028ರ ಇಸವಿಯಲ್ಲಿ ಮಹಿಳಾ ಮುಖ್ಯಮಂತ್ರಿ ಕಾಣುವ ಸಾಧ್ಯತೆ ಇದೆ ಎಂದು ಯರಗುಂಟೆಯ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರಕ್ಕೆ ಸಮೀಪದ ಯರಗುಂಟೆಯ ಶ್ರೀ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಸಾರವನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಯರು ಪ್ರಸ್ತುತ ಪ್ರತಿಯೊಂದು ಕ್ಷೇತ್ರ ಗಳಲ್ಲೂ ಸಹ ತಮ್ಮದೇ ಆದ ಸಾಧನೆ ಮಾಡುತ್ತಿ ದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಮತ್ತೊಬ್ಬರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಮಹಿಳೆಯರಿಂದಲೇ ರಥ ಎಳೆಸುವ ಸಂಪ್ರದಾಯ ಉತ್ತಮವಾಗಿ ಸಾಗಿ ಬರುತ್ತಿದ್ದು, ರಥೋತ್ಸವದ ಮೂಲಕ ಭಕ್ತರ ಇಷ್ಟಾರ್ಥಗಳ ಸಿದ್ಧಿಯ ಜೊತೆಗೆ ಮಹಿಳೆಯರಿಗೂ ಸಮಾನತೆಯನ್ನು ನೀಡಿದ ಕೀರ್ತಿ ಶ್ರೀ ಗುರು ಕರಿಬಸವೇಶ್ವರರಿಗೆ ಸಲ್ಲುತ್ತದೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕರಿಬಸವೇಶ್ವರರು ಕೇವಲ ದೆವ್ವ ಭೂತಗಳನ್ನು ಬಿಡಿಸಲಿಲ್ಲ. ಭಕ್ತರ ಮನಸಿನಲ್ಲಿದ್ದ ಅಜ್ಞಾನ, ಅಂಧಕಾರ ದೂರ ಮಾಡಿದರು. ಇತ್ತೀಚೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚಾದರೂ ಕೌಟುಂಬಿಕ ಸಾಮರಸ್ಯಗಳು ಹದಗೆಡುತ್ತಿವೆ. ನಾಟಕೀಯ ಪ್ರಪಂಚವಾಗಿ ಪರಿವರ್ತನೆಯಾಗುತ್ತಿದೆ. ವಿದ್ಯಾವಂತ ಮಹಿಳೆಯರೇ ತಮ್ಮ ಮನೆಯ ಹಿರಿಯರನ್ನು ಕಡೆಗಣಿಸಿ, ವೃದ್ಧಾಶ್ರಮದ ಹಾದಿ ಹಿಡಿಯುವಂತೆ ಮಾಡುತ್ತಿದ್ದಾರೆ. ಇದು ನಾಗರಿಕ ಸಮಾಜದ ಲಕ್ಷಣವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾವಂತರು ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡ, ಗುರು-ಹಿರಿಯರನ್ನು ಗೌರವಿಸುವ ಹೊಸ ನಾಡನ್ನು ಕಟ್ಟುವ ಕೆಲಸವಾಗಬೇಕು ಎಂದು ಆಶಿಸಿದರು.
ಹಾಲಸ್ವಾಮಿ ವಿರಕ್ತಮಠದ ಶ್ರೀ ಡಾ. ಬಸವ ಜಯಚಂದ್ರ ಮಹಾಸ್ವಾಮೀಜಿ ಮಾತನಾಡಿ, ಸೇವಾ ಮನೋಭಾವವುಳ್ಳವರೇ ನಿಜವಾದ ಭಕ್ತರು. ಪ್ರಸ್ತುತ ನಿಜವಾದ ಸೇವಾ ಮನೋಭಾವ ಮರೀಚಿಕೆಯಾಗುತ್ತಿದೆ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ತೆಲಗಿ ಮಲ್ಲಿಕಾರ್ಜುನ್, ಎಸ್. ಶರಣಪ್ಪ ಕೋಗಲೂರು, ಬಸವರಾಜಪ್ಪ ನೀರ್ಥಡಿ, ಸಿದ್ದನಮಠ ರಾಮಣ್ಣ, ಎನ್.ಎಸ್. ರಾಜು ಸೇರಿದಂತೆ ಇತರರು ಇದ್ದರು.