ಪಾಲಿಕೆ ಸಾಮಾನ್ಯ ಸಭೆ: ಕಾಂಗ್ರೆಸ್ ಸದಸ್ಯರ ಆಗ್ರಹಕ್ಕೆ ಮಣಿಯದ ಮೇಯರ್
ದಾವಣಗೆರೆ, ಸೆ.8- ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಮತ್ತೊಮ್ಮೆ ಭಿತ್ತಿ ಚಿತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರೆ, ಮಹಾಪೌರರನ್ನೊಳಗೊಂಡಂತೆ ಬಿಜೆಪಿ ಸದಸ್ಯರು ಪಟ್ಟುಬಿಡದೆ ಸಮರ್ಥಿಸಿಕೊಂಡಿದ್ದಾರೆ.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತೆರಿಗೆ ಹೆಚ್ಚಳವನ್ನು ತೀವ್ರವಾಗಿ ವಿರೋಧಿಸಿದರು.
ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಮನೆಯ ಮುಂಭಾಗ ಇರುವ ತುಳಸಿ ಪೂಜೆ ಜಾಗಕ್ಕೂ ಕಂದಾಯ ವಿಧಿಸಲಾಗುತ್ತಿದೆ. ಎಪಿಎಂಸಿ ವರ್ತಕರು ಧಾನ್ಯ ಒಣಗಿಸಿಕೊಳ್ಳಲು ಬಿಡುವ ಕಣಕ್ಕೂ ತೆರಿಗೆ ವಿಧಿಸಲಾಗುತ್ತದೆ. ಕೊರೊನಾ ಸಂಕಷ್ಟದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗಿದೆ.
ಆಸ್ತಿ ತೆರಿಗೆ ಮೇಲಿನ ದಂಡಕ್ಕೂ ಸೆಸ್ ವಿಧಿಸ ಲಾಗುತ್ತಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯರೆಲ್ಲರೂ ಭಿತ್ತಿ ಪತ್ರ ಪ್ರದರ್ಶಿಸಿ, ಪಾಲಿಕೆ ನಿರ್ಧಾರವನ್ನು ಖಂಡಿಸಿದರು.
ಮುಂದುವರೆದು ಮಾತನಾಡಿದ ನಾಗರಾಜ್, ಈಗಾಗಲೇ ಕೆಲವು ಪಾಲಿಕೆಗಳಿಂದ ತೆರಿಗೆ ಹೆಚ್ಚಳ ಪುನರ್ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ನಮ್ಮ ಪಾಲಿಕೆಯಿಂದಲೂ ಪ್ರಸ್ತಾವನೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಈ ಮಧ್ಯೆ ತೆರಿಗೆ ಹೆಚ್ಚಳ ಸಾಮಾನ್ಯರಿಗೆ ತುಸು ಹೊರೆಯಾಗಬಹುದು. ಆದರೆ ಪಾಲಿಕೆ ನಡೆಸಲು ಆದಾಯ ಎಲ್ಲಿಂದ ಬರಬೇಕು ಎಂದು ಮಾಜಿ ಮೇಯರ್ ಅಜಯ್ ಕುಮಾರ್ ಪ್ರಸ್ತಾಪಿಸುತ್ತಿದ್ದಂತೆ, ಜನತೆಗೆ ಹೊರೆಯಾಗಲಿದೆ ಎಂದು ಒಪ್ಪಿಕೊಂಡ ಅಜಯ್ ಕುಮಾರ್ ಅವರಿಗೆ ಎ.ನಾಗರಾಜ್ ಧನ್ಯವಾದ ಹೇಳಿದಾಗ ಸಭೆಯಲ್ಲಿ ನಗೆ ಎದ್ದಿತು.
ಸದಸ್ಯ ಪ್ರಸನ್ನ ಕುಮಾರ್, ನೂತನ ತೆರಿಗೆ ಪದ್ಧತಿ ಜನತೆಗೆ ಹೊರೆಯಾಗುವುದಿಲ್ಲ ಎಂದು ಕೆಲ ಉದಾಹಣೆಗಳೊಂದಿಗೆ ಸಮರ್ಥಿಸಿಕೊಂಡರು. ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ಹೆಚ್ಚಳದಿಂದ ತೊಂದರೆಯಾಗುವುದಿಲ್ಲ ಎಂದರು. ಸರ್ಕಾರದ ತೀರ್ಮಾನ ನೋಡಿ ನಿರ್ಧರಿಸಲಾಗುವುದು ಎಂದರು.
ಪ್ರತಿ ತಿಂಗಳೂ ಸಾಮಾನ್ಯ ಸಭೆ ನಡೆಸಿ: ಅಜಯ್
ಪ್ರತಿ ತಿಂಗಳೂ ಸಹ ಸಾಮಾನ್ಯ ಸಭೆ ನಡೆಸಿ, ದಾಖಲೆ ಮಾಡುವಂತೆ ಮಾಜಿ ಮೇಯರ್ ಅಜಯ್ ಕುಮಾರ್ ಹಾಲಿ ಮೇಯರ್ ವೀರೇಶ್ ಅವರಿಗೆ ಮನವಿ ಮಾಡಿದರು.
ನಾನು ಮೇಯರ್ ಆದ ಅವಧಿಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಒಂದು ಬಾರಿ ಮಾತ್ರ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಯಿತು. ಆದರೆ ನೀವು ಈಗಾಗಲೇ ಎರಡು ಸಭೆ ನಡೆಸಿದ್ದೀರಿ. ಸಭೆ ವಿಳಂಬವಾದಷ್ಟೂ ಪಾಲಿಕೆಯ ಕೆಲಸಗಳು ವಿಳಂಬವಾಗುತ್ತವೆ ಎಂದು ಹೇಳಿದರು. ನಾವು ಪದೇ ಪದೇ ಅಧಿಕಾರಿಗಳನ್ನು ವಿರೋಧಿಸಿ, ಗಲಾಟೆ ಮಾಡುವುದರಿಂದ ಪ್ರಯೋಜನವಿಲ್ಲ. ಹೊಂದಾಣಿಕೆಯಿಂದ ಕಾರ್ಯ ಸಾಧಿಸಬೇಕು. ಸಭೆಗಳನ್ನು ಹೆಚ್ಚು ನಡೆದಾಗ, ಸದಸ್ಯರು ಸಮಸ್ಯೆ ಹಾಗೂ ನೋವುಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ತಪ್ಪು ಮಾಡಿದ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲೂ ಸಾಧ್ಯವಾಗುತ್ತದೆ ಎಂದರು.
ಪಾಲಿಕೆ ಆಯುಕ್ತರಿಂದ ಬೊಕ್ಕಸಕ್ಕೆ ನಷ್ಟ : ಎ. ನಾಗರಾಜ್
ಮಹಾನಗರ ಪಾಲಿಕೆ ಆಯುಕ್ತರಿಂದ ಪ್ರತಿ ತಿಂಗಳು ಏಳೆಂಟು ಲಕ್ಷ ರೂ. ನಷ್ಟು ಹಣ ಪಾಲಿಕೆ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದರು.
ಸಂತೆ ಶುಲ್ಕ ವಸೂಲಿಗೆ 10 ಲಕ್ಷ ಇಎಂಡಿ ನಿಗದಿಪಡಿಸಲಾಗಿದೆ. ಯಾವ ಬೇಸ್ ಮೇಲೆ ಮೊತ್ತ ಹೆಚ್ಚಿಸಲಾಗಿದೆ ಎಂದು ಆಯುಕ್ತರನ್ನು ಪ್ರಶ್ನಿಸಿದರಲ್ಲದೆ, ನಿಗದಿತ ದಿನದಂತೆ ಆಯುಕ್ತರು ಬಿಡ್ ಓಪನ್ ಮಾಡದೇ ಇರುವುದಕ್ಕೆ ಕಾರಣವೇನು ? ಎಂದು ಪ್ರಶ್ನಿಸಿದರು.
ಆಯುಕ್ತ ವಿಶ್ವನಾಥ ಮುದಜ್ಜಿ ಉತ್ತರಿಸುತ್ತಾ, ಈ ಹಿಂದೆ ಜಕಾತಿ ವಸೂಲಾತಿ ನೆಪದಲ್ಲಿ ಬೀದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು. ಅಲ್ಲದೆ ಟೆಂಡರ್ ಪಡೆದವರು ಹಣ ನೀಡದ ಉದಾಹರಣೆಗಳೂ ಇದ್ದವು. ಇದು ಮರುಕಳಿಸಬಾರದೆಂಬ ಉದ್ದೇಶದಿಂದ ಬಿಡ್ ಮೊತ್ತ ಹೆಚ್ಚಿಸಲಾಗಿದೆ ಎಂದರು.
ಸದಸ್ಯ ಉದಯ್ ಕುಮಾರ್ , ಇ- ಟೆಂಡರ್ನಲ್ಲೂ ಗೋಲ್ ಮಾಲ್ ನಡೆಯುತ್ತಿದೆ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ನಡೆಯದಿದ್ದರೆ ಬಿಡ್ ಓಪನ್ ಆಗಲ್ಲ ಎಂದು ನೇರ ಆರೋಪಿಸಿದರು.
ಸಾಮಾನ್ಯ ಸಭೆಯಲ್ಲಿ ಪಕ್ಷ ಪ್ರತಿಷ್ಠೆಯದ್ದೇ ಚರ್ಚೆ
ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ನಡೆಯುತ್ತಿದ್ದ ಚರ್ಚೆ ನಗರಾಭಿವೃದ್ಧಿಗೆ ಬೇಕಾದ ಆದಾಯದ ಕಡೆ ಹೊರಳಿ ಕೊನೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಬಂದ ಅನುದಾನ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಬಂದಿದ್ದು ಯಾರಿಂದ ? ಎಂಬ ಬಗ್ಗೆ ಆರಂಭಗೊಂಡ ಚರ್ಚೆ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
ವಿಪಕ್ಷ ನಾಯಕ ಎ. ನಾಗರಾಜ್ ಸ್ಮಾರ್ಟ್ ಸಿಟಿ ಯೋಜನೆ ಬಂದಿದ್ದು ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಾಡಿದ ಅಭಿವೃದ್ಧಿಯ ಫಲದಿಂದ ಎಂದು ಹೇಳಿದರು.
ಬಿಜೆಪಿ ಸದಸ್ಯರು ಸಂಸದ ಜಿ.ಎಂ. ಸಿದ್ದೇಶ್ವರ ಅವರೇ ಸ್ಮಾರ್ಟ್ ಸಿಟಿ ಯೋಜನೆ ತಂದಿದ್ದು ಎಂದು ಸಮರ್ಥಿಸಿಕೊಂಡರು. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸಹ ಸಂಸದರಿಂದಲೇ ಯೋಜನೆ ಜಾರಿಯಾಯಿತು ಎಂದು ಹೇಳಿದರು. ನಗರದ ಅಭಿವೃದ್ಧಿ ಕುರಿತು ಚರ್ಚಿಸಬೇಕಾಗಿದ್ದ ಸಭೆ ತನ್ನ ಮಹತ್ವವನ್ನೇ ಕಳೆದುಕೊಂಡು ಹೆಚ್ಚಿನ ಸಮಯ ಪಕ್ಷಗಳ ಪ್ರತಿಷ್ಠೆಗೆ ಬಲಿಯಾಯಿತು.
ತುಸು ಹೊತ್ತಿನ ನಂತರ ಲಸಿಕೆ ವಿಚಾರವಾಗಿಯೂ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಪ್ರಧಾನಿ ಮೋದಿ ದೇಶಾದ್ಯಂತ ಉಚಿತ ಲಸಿಕೆ ನೀಡಿದ್ದಾರೆಂದು ಸದಸ್ಯ ಪ್ರಸನ್ನಕುಮಾರ್ ಹೇಳಿದಾಗ, ವಿಪಕ್ಷ ನಾಯಕ ನಾಗರಾಜ್, ಶಾಮನೂರು ಶಿವಶಂಕರಪ್ಪನವರು ನಗರದ ಜನತೆಗೆ ಉಚಿತವಾಗಿ ಲಸಿಕೆ ನೀಡಿ ಜನರ ಪ್ರಾಣ ಉಳಿಸಿದ್ದಾರೆ ಎಂದರು. ಈ ವಿಷಯ ಮತ್ತೊಮ್ಮೆ ಪಕ್ಷಗಳ ಪ್ರತಿಷ್ಠೆಯ ಚರ್ಚೆಗೆ ಗ್ರಾಸವಾಯಿತು. ಅವರವರ ಪಕ್ಷದ ಬಗ್ಗೆ ಸದಸ್ಯರು ಮಾತನಾಡಿದಾಗ, ಉಳಿದ ಸದಸ್ಯರು ಟೇಬಲ್ ತಟ್ಟಿ ಖುಷಿ ವ್ಯಕ್ತಪಡಿಸುತ್ತಿದ್ದರು.
ಇದರ ಮಧ್ಯೆ ಹಿರಿಯ ಸದಸ್ಯ ಅಬ್ದುಲ್ ಲತೀಫ್ ಉತ್ತರ ವಲಯದ ಶಾಸಕರು ಯಾವುದಾದರೂ ವಿಶೇಷ ಅನುದಾನ ತಂದಿದ್ದಾರಾ? ಎಂಬ ಪ್ರಶ್ನೆಗೆ `ನೀನು ಯಾವಾಗಾದ್ರೂ ಕೇಳಿದ್ದೀಯಾ’ ಎಂದು ಶಾಸಕ ರವೀಂದ್ರನಾಥ್ ಉತ್ತರಿಸಿದರು.
ಅಪಾರ್ಟ್ಮೆಂಟ್ ಅವ್ಯವಹಾರ ತನಿಖೆಗೆ ಆಗ್ರಹ
ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಪಾಲಿಕೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದರು.
ಸುಮಾರು 10 ಅಪಾರ್ಟ್ಮೆಂಟ್ಗಳ ಹೆಸರುಗಳನ್ನೇಳಿದ ಅವರು, ಈ ಎಲ್ಲಾ ಅಪಾರ್ಟ್ಮೆಂಟ್ಗೆ ಸಂಬಂಧಿಸಿದಂತೆ ಪೈಲ್ಗಳನ್ನು ತರಿಸಿ ಪರಿಶೀಲಿಸುವಂತೆ ಹೇಳಿದರು.
ಡಿಸಿ ಕಚೇರಿ ಬಳಿಯ ವೃತ್ತಕ್ಕೆ ರೇಣುಕಾಚಾರ್ಯರ ಹೆಸರಿನ ಬದಲು ಜಿ.ಮಲ್ಲಿಕಾರ್ಜುನಪ್ಪ ಹೆಸರನ್ನಿಡಲು ಬಂದ ಪ್ರಸ್ತಾಪಕ್ಕೆ ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೃತ್ತಕ್ಕೆ ಜಗದ್ಗುರು ರೇಣುಕಾಚಾರ್ಯ ವೃತ್ತ ಎಂದು ನಾಮಕರಣ ಮಾಡಲು 2012ರಲ್ಲಿಯೇ ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಪ್ರಸ್ತಾವನೆ ಸಲ್ಲಿಕೆ ತಡವಾದ್ದರಿಂದ ಮರುಪರಿಶೀಲನೆಗೆ ಸರ್ಕಾರ ಸೂಚಿಸಿತ್ತು. ಆದರೆ ಇದೀಗ ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರಿಡುವ ಸಲುವಾಗಿ ನೆಪ ಮಾತ್ರಕ್ಕೆ ಒಂದು ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಆಕ್ಷೇಪಣೆ ಸಲ್ಲಿಕೆಯಾದ ಬಗ್ಗೆ ತನಿಖೆ ನಡೆಯಬೇಕು. ಜಂಗಮ ಸಮಾಜಕ್ಕೆ ಅಗೌರವ ತರುವ ಕೆಲಸ ಮಾಡದೆ, ರೇಣುಕಾಚಾರ್ಯರ ಹೆಸರನ್ನೇ ವೃತ್ತಕ್ಕೆ ನಾಮಕರಣ ಮಾಡಿ, ಬೇರೊಂದು ರಸ್ತೆ ಅಥವಾ ವೃತ್ತಕ್ಕೆ ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರಿಡಲಿ ಎಂದರು.
ಮಾಜಿ ಮೇಯರ್ಗಳ ನಡುವೆ ವಾಕ್ಸಮರ
ಸಿಎ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಪಕ್ಷದವರೇ ಆದ ಮಾಜಿ ಮೇಯರ್ಗಳಾದ ಉಮಾ ಪ್ರಕಾಶ್ ಹಾಗೂ ಅಜಯ್ ಕುಮಾರ್ ಅವರುಗಳ ನಡುವೆ ಸಭೆಯಲ್ಲಿ ವಾಕ್ಸಮರ ನಡೆಯಿತು.
ನಿಟುವಳ್ಳಿಯ 2 ಎಕರೆ 28 ಗುಂಟೆ ಹೊರತುಪಡಿಸಿ ಉಳಿದ ಲೇಔಟ್ ಹಾಗೂ ನಿವೇಶನಗಳಿಗೆ ಡೋರ್ ನಂಬರ್ ನೀಡಿರುವುದನ್ನು ವಿಪಕ್ಷ ನಾಯಕ ಎ. ನಾಗರಾಜ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಆಗ ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ್, ಈ ಪ್ರದೇಶದಲ್ಲಿ ಹೈಟೆನ್ಷನ್ ಲೈನ್ ಇದ್ದ ಕಾರಣ ಬಫರ್ ಝೋನ್ ಇದ್ದು ತಮ್ಮ ವಿರೋಧ ವ್ಯಕ್ತಪಡಿಸಿದ್ದೆವು. ಆದರೂ ಮನೆ ಕಟ್ಟಲು ಅನಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಜಯ್ ಕುಮಾರ್ ಮಾತನಾಡಿ, ಹೊಸ ಬಡಾವಣೆ ನಿರ್ಮಾಣಕ್ಕೆ ಎನ್ಒಸಿ ನೀಡಲು ಹತ್ತಾರು ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ನಂತರವೇ ಎನ್ಒಸಿ ಪಡೆದು ಡೆವಲಪರ್ಗಳು ಬಡಾವಣೆ ಅಭಿವೃದ್ಧಿ ಪಡಿಸುತ್ತಾರೆ. ಒಮ್ಮೆ ಡೋರ್ ನಂಬರ್ ನೀಡಿದ ನಂತರ ಅದನ್ನು ರದ್ಧುಪಡಿಸುವ ಅಧಿಕಾರ ಇಲ್ಲ ಎಂದರು.
ಸಿಡಿಪಿ ಪ್ಲಾನ್ ಪ್ರಕಾರ ಸಿಎ ಸೈಟ್ ಬಿಟ್ಟು ಡೋರ್ ನಂಬರ್ ನೀಡಲು ನಮ್ಮ ವಿರೋಧವಿಲ್ಲ ಎಂದು ಉಮಾ ಪ್ರಕಾಶ್ ಹೇಳಿದರು. ಉಮಾ ಪ್ರಕಾಶ್ ಅವರ ಆಕ್ಷೇಪಣೆಯ ನಡುವೆಯೂ ಅನುಮತಿ ಏಕೆ ನೀಡಲಾಗಿದೆ ಎಂದು ನಾಗರಾಜ್ ಪ್ರಶ್ನಿಸಿದರು. ಕೊನೆಗೆ ಮೇಯರ್ ವೀರೇಶ್, ಕಾನೂನು ಸಲಹೆ ಪಡೆದು ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಈ ವೇಳೆ ಸದಸ್ಯ ಚಮನ್ ಸಾಬ್ ಹಾಗೂ ಅಬ್ದುಲ್ ಲತೀಫ್ ಅವರುಗಳು ಪಾಲಿಕೆ ಸದಸ್ಯರ ಗಮನಕ್ಕೆ ತಾರದೇ ಡೋರ್ ನಂಬರ್ ನೀಡಲಾಗುತ್ತಿದೆ. ಈ ಹಿಂದೆ ಐದು ಜನರ ಸಮಿತಿ ರಚಿಸುವುದಾಗಿ ಹೇಳಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಏತನ್ಮಧ್ಯೆ 30ನೇ ವಾರ್ಡ್ನಲ್ಲಿ ನನ್ನ ಗಮನಕ್ಕೂ ಬಾರದೆ 8 ಡೋರ್ ನಂಬರ್ಗಳನ್ನು ನೀಡಲಾಗಿದೆ ಎಂದು ಸದಸ್ಯರೊಬ್ಬರು ಹೇಳಿದರು.
ಸದಸ್ಯ ಪ್ರಸನ್ನ ಕುಮಾರ್, ಪ್ರತಿ ಸಭೆಯಲ್ಲೂ ಅಕ್ರಮ ಡೋರ್ ನಂಬರ್ ಎಂದು ಆಪಾದನೆ ಮಾಡುವುದು ಬೇಡ. ನಿರ್ದಿಷ್ಟ ಪ್ರಕರಣಗಳಿದ್ದರೆ ಹೇಳಿ ಎಂದಾಗ, ಸದಸ್ಯ ಉದಯ ಕುಮಾರ್ ವಿದ್ಯುತ್ ಸೌಲಭ್ಯ ಇರದಿದ್ದರೂ ಡೋರ್ ನಂಬರ್ ನೀಡಲಾಗಿದೆ ಎಂದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಸಮರ ನಡೆಯಿತು.
ಸಂತೆ ಸುಂಕದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ವಿಪಕ್ಷ ನಾಯಕ ನಾಗರಾಜ್, ಸಂತೆ ಸುಂಕ ಬಿಡ್ ಹೆಚ್ಚಳಕ್ಕೆ ಆಕ್ಷೇಪಿಸಿ, ಜಕಾತಿ ವಸೂತಿ ಬಿಡುವಂತೆ ಹೇಳಿದರು. ಬಿಜೆಪಿಯ ಮಾಜಿ ಮೇಯರ್ ಅಜಯ್ ಕುಮಾರ್ ಸಾರ್ವಜನಿಕರ ಹಿತದೃಷ್ಟಿಯಿಂದ ಜಕಾತಿ ವಸೂಲಿ ರದ್ದು ಮಾಡಿ ಎಂದಾಗ, ಹಾಲಿ ಮೇಯರ್ ವೀರೇಶ್, ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು, ಮುಂದೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ವಿಜಯದಶಮಿ ಶೋಭಾಯಾತ್ರೆಗೆ ಸಾರ್ವಜನಿಕ ವಿಜಯದಶಮಿ ಮಹೋತ್ಸವಕ್ಕೆ 3 ಲಕ್ಷಗಳನ್ನು ನೀಡಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ಎ.ನಾಗರಾಜ್, ಖಾಸಗಿ ಸಮಿತಿಗೆ ಹಣ ನೀಡಲು ಬರುತ್ತದೋ ಇಲ್ಲವೋ ಪರಿಶೀಲಿಸುವುದು ಸೂಕ್ತ. ಲೆಕ್ಕ ತಪಾಸಣೆ ವಿಭಾಗದಿಂದ ಆಕ್ಷೇಪಣೆ ಬರಬಹುದು ಎಂದು ಸಲಹೆ ನೀಡಿದರು.
ಈ ಹಿಂದೆ ಹಲವಾರು ಬಾರಿ ಹಣ ಕೊಟ್ಟಿರುವ ಉದಾಹರಣೆಗಳಿದ್ದು, ನಾನು ಮೇಯರ್ ಆದಾಗ ಹಿಂದಿನ ಪದ್ಧತಿಯಂತೆಯೇ ಹಣ ಕೊಡಲು ಒಪ್ಪಿರುವುದಾಗಿ ಮಾಜಿ ಮೇಯರ್ ಅಜಯ್ ಕುಮಾರ್ ಹೇಳಿದರು.
ಸ್ಥಾಯಿ ಸಮಿತಿ ಸದಸ್ಯರಿಗೆ ವಾಹನ ನೀಡಲು ತೀರ್ಮಾನಿಸಿರುವ ಕುರಿತು ಪ್ರಸ್ತಾಪಿಸಿದ ನಾಗರಾಜ್, ಈ ಹಿಂದೆ ಇಂತಹ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದ ಉದಾಹರಣೆ ಇದೆ. ಕಾನೂನಿನಲ್ಲಿ ಅವಕಾಶ ಇದ್ದರೆ ಕೊಡಿ. ಆಕ್ಷೇಪಣೆ ವ್ಯಕ್ತವಾದರೆ ನಾವು ಜವಾಬ್ದಾರರಲ್ಲ. ಇದಕ್ಕೆ ವಿಪಕ್ಷ ಸದಸ್ಯರ ವಿರೋಧವಿದೆ ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಸ್ಥಾಯಿ ಸಮಿತಿ ಸದಸ್ಯರಾದ ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯೆಪ್ಪ, ಉಮಾ ಪ್ರಕಾಶ್ , ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಪಾಲಿಕೆ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.