ಅಸಂಘಟಿತ ಕಾರ್ಮಿಕರ ನೋಂದಣಿಗೆ ಡಿಸಿ ಸೂಚನೆ

ನೋಂದಣಿ ವಿಧಾನ

ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಲಭ್ಯವಿದ್ದರೆ, www.eshram.gov.in  ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳ ಬಹುದು ಅಥವಾ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ನೋಂದಣಿ ಮಾಡಿಕೊಳ್ಳಬಹುದು.  ಸಿಎಸ್‍ಸಿಗಳಲ್ಲಿ ನೊಂದಣಿ ಉಚಿತವಾಗಿದ್ದು, ಗುರುತಿನ ಚೀಟಿ ಅಗತ್ಯವಿದ್ದಲ್ಲಿ 20 ರೂ. ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದಾಗಿದೆ.

ಸಾಮಾಜಿಕ ಭದ್ರತೆ, ಸುರಕ್ಷಾ ಬಿಮಾ ಯೋಜನೆಗಳಿಗಾಗಿ ಇ-ಶ್ರಮದಲ್ಲಿ ನೋಂದಣಿ

ದಾವಣಗೆರೆ ಡಿ.2- ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ದೊರಕುವಂತಾಗಲು ಇ-ಶ್ರಮ ಪೋರ್ಟಲ್‍ನಲ್ಲಿ, ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಎಲ್ಲ ವರ್ಗದ ಕಾರ್ಮಿಕರನ್ನು ತಪ್ಪದೇ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳಿಗೆ ಸೂಚನೆ  ನೀಡಿದ್ದಾರೆ.

ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡುತ್ತಿದ್ದರು.

379 ಬಗೆಯ ವರ್ಗಗಳ ಕಾರ್ಮಿಕರಿಗೆ ಸಂಬಂಧಿಸಿದಂತೆ ಸೂಕ್ತ ಅಂಕಿ-ಅಂಶಗಳನ್ನು ಸಂಗ್ರಹಿಸಿ, ಅವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ನೀಡುವುದು ಅಗತ್ಯವಾಗಿರುತ್ತದೆ ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಕೇವಲ 31,495 ಕಾರ್ಮಿಕರು ಮಾತ್ರ ಇ-ಶ್ರಮ ಪೋರ್ಟಲ್ www.eshram.gov.in ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಉಳಿದ ಅರ್ಹ ಕಾರ್ಮಿಕರು ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ.  ವಿವಿಧ ಕಾರ್ಮಿಕ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.

ನೋಂದಣಿ ಉಚಿತವಾಗಿದ್ದು, ಯಾರೂ ಕೂಡ ಹಣ ನೀಡುವ ಅಗತ್ಯವಿಲ್ಲ.  ನೋಂದಣಿ ನೆಪದಲ್ಲಿ ಹಣ ವಸೂಲಿಗೆ ಮುಂದಾದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಸಿದರು.

ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 5 ಲಕ್ಷ ನರೇಗಾ ಕೂಲಿ ಕಾರ್ಮಿಕರಿದ್ದಾರೆ.  ಗ್ರಾ.ಪಂ. ಕಚೇರಿಯಲ್ಲಿಯೇ ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ನಿರ್ದೇಶನ ನೀಡಲಾಗುವುದು ಎಂದರು. 

ಸಹಾಯಕ ಕಾರ್ಮಿಕ ಆಯುಕ್ತರಾದ ವೀಣಾ ಮಾಹಿತಿ ನೀಡಿ, ದೇಶದಲ್ಲಿ ಸುಮಾರು 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗದಲ್ಲಿ ತೊಡಗಿ ಕೊಂಡಿದ್ದಾರೆ. ಇವರು ನೋಂದಣಿ ಮಾಡಿಸಿಕೊಂಡಲ್ಲಿ ಸಾಮಾಜಿಕ ಭದ್ರತೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಯೋಜನ ಹಾಗೂ ವಿವಿಧ ಕಲ್ಯಾಣ ಯೋಜನೆಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.

ಕಾರ್ಮಿಕರಿಗಾಗಿ ಇಲಾಖೆಯು ಕಾರ್ಮಿಕ ಸಹಾಯವಾಣಿ 155214, ಇ-ಶ್ರಮ್ ಸಹಾಯವಾಣಿ 14434, ದೂರು ದಾಖಲಿಸಲು www.gms.eshram.gov.inನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಡಿಹೆಚ್‍ಒ ಡಾ. ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಉಪಸ್ಥಿತರಿದ್ದರು.

error: Content is protected !!