ಬಿಜೆಪಿ ಸರ್ಕಾರ ಬೇಕೆಂದೇ ಬೆಲೆ ಏರಿಸಿಲ್ಲ

ಕಾಂಗ್ರೆಸ್‌ ಆಡಳಿತದಲ್ಲಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 1,200 ರೂ.ಗಳಿಗೆ ತಲುಪಿತ್ತು 

ತೈಲ, ಅಡುಗೆ ಅನಿಲ ಬೆಲೆ ಏರಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಸಮರ್ಥನೆ

ದಾವಣಗೆರೆ, ಸೆ.8 – ಬೆಲೆ ಏರಿಕೆ ಮೊದಲ ಬಾರಿಯೇನೂ ಆಗಿಲ್ಲ. ಈ ಹಿಂದಿನ ಸರ್ಕಾರಗಳ ಆಡಳಿತದಲ್ಲಿಯೂ ನೂರಾರು ಬಾರಿ ಬೆಲೆ ಏರಿಕೆ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ನಿರ್ಧಾರವಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಅವರು ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಅಡುಗೆ ಅನಿಲದ ಸಿಲಿಂಡರ್ ಬೆಲೆ 1,200 ರೂ.ಗಳವರೆಗೂ ತಲುಪಿತ್ತು. ಬಿಜೆಪಿ ಬೇಕೆಂದು ಬೆಲೆ ಏರಿಕೆ ಮಾಡಿಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದೂ ಅವರು ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತ ಇದ್ದಾಗ ಕೊರೊನಾ ಬಂದಿರಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಕೊರೊನಾ ಪರಿಸ್ಥಿತಿ ಇನ್ನಷ್ಟು ಸಂಕಷ್ಟಮಯವಾಗಿ ರುತ್ತಿತ್ತು. ಇನ್ನಷ್ಟು ಜನರು ಸಾವಿಗೀಡಾಗಿರುತ್ತಿದ್ದರು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 70 ಕೋಟಿಗೂ ಹೆಚ್ಚು ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದು ರವಿಕುಮಾರ್ ಹೇಳಿದರು.

ಸಂಪುಟ ರಚನೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ನಂತರ ಹಾಗಾಗುತ್ತದೆ – ಹೀಗಾಗುತ್ತದೆ ಎಂದು ಮಾಧ್ಯಮಗಳಲ್ಲಿ ಮಾತುಗಳು ಕೇಳಿ ಬಂದವು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಬೊಮ್ಮಾಯಿ ಹೆಸರನ್ನು ಸೂಚಿಸಿದ್ದಾರೆ. ಸುಸೂತ್ರವಾಗಿ ಅಧಿಕಾರ ಬದಲಾವಣೆ ಆಯಿತು. ಈಗಲೂ  ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನಗಳು ಇದ್ದು, ರಾಜ್ಯದ ಪರಿಸ್ಥಿತಿ ನೋಡಿ ಮಂತ್ರಿ ಸ್ಥಾನಗಳು ನಿರ್ಧಾರವಾಗಲಿವೆ ಎಂದು ಹೇಳಿದರು.

ದಾವಣಗೆರೆ ಸೇರಿ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 17 ಶಾಸಕರು ಬಿಜೆಪಿಗೆ ಬಂದ ಕಾರಣದಿಂದಾಗಿ ಬಿಜೆಪಿ ಸರ್ಕಾರ ರಚನೆ ಸಾಧ್ಯ ವಾಗಿದೆ. ಆ ಶಾಸಕರನ್ನು ನಗಣ್ಯ ಮಾಡಲಾಗದು, ಅವರಿಗೆ ನ್ಯಾಯ ಕೊಡಬೇಕು ಎಂದರು.

ಸಚಿವ ಸ್ಥಾನವನ್ನು ಕೆಲ ಜಿಲ್ಲೆಗಳಿಗೆ ನೀಡಲು ಸಾಧ್ಯವಾಗದ ಕಾರಣ ಕೆಲವೆಡೆ ತೊಡಕುಗಳಾಗಿರುವುದನ್ನು ಒಪ್ಪಿಕೊಂಡ ಅವರು, ರಾಜ್ಯದ ಜನತೆ, ಕಾರ್ಯಕರ್ತರು ಹಾಗೂ ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಬಗ್ಗೆ ಜೆಡಿಎಸ್‌ ಒಲವು ಹೊಂದಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗಳು ಜೊತೆಯಾಗಿ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. ಈ ಬಗ್ಗೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ ಎಂದು ಅವರು ಹೇಳಿದರು.

error: Content is protected !!