ಬಾಗ್ಲು ತಗೀರಿ..ಲಸಿಕೆ ಹಾಕಿಸ್ಕಳ್ರಿ…

ಭಾಷಾ ನಗರ ವ್ಯಾಪ್ತಿಯಲ್ಲಿ ಮನೆಗಳ ಬಾಗಿಲು ಬಡಿದು ಲಸಿಕೆ ಹಾಕಿಸಿದ ಡಿಸಿ

ದಾವಣಗೆರೆ, ಡಿ.1- ಇಲ್ಲಿನ ಭಾಷಾ ನಗರ ಸೇರಿದಂತೆ, ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರುವ ಪ್ರತಿ ಮನೆಗಳಿಗೂ ಭೇಟಿ ನೀಡಿ, ಬಾಗಿಲು ತಟ್ಟಿ ಲಸಿಕೆ ಹಾಕಿಸುವ ಮೂಲಕ ಮಹಾಮಾರಿ ಕೋವಿಡ್ ಸೋಂಕಿಗೆ ಬೇಕಾಗಿರುವ ಲಸಿಕೆಯಿಂದ ದೂರ ಉಳಿಯದಂತೆ ಮಾಡುವಲ್ಲಿ ಪ್ರಯತ್ನಿಸಿದರು.

ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಭಾಷಾ ನಗರದ ಮನೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಾಗಿಲು ಹಾಕಿದರೂ ಬಿಡದೇ ಬಾಗಿಲು ಬಡಿದು ಕನ್ನಡ, ಉರ್ದು ಭಾಷೆಗಳಲ್ಲಿ ಲಸಿಕೆ ಪಡೆದಿರೇನು, ನೀವು ಲಸಿಕೆ ಪಡೆದರೆ ಆರೋಗ್ಯ ಉತ್ತಮವಾಗಿರುತ್ತೆ ಎಂಬುದಾಗಿ ಆ ಭಾಗದ ಜನರಿಗೆ ಮನವರಿಕೆ ಮಾಡುತ್ತಾ, ಲಸಿಕೆ ಪಡೆಯಲು ಮನವೊಲಿಸಿದರು.

ಅಲ್ಲದೇ, ಲಸಿಕೆ ಪಡೆಯದೇ ಸುಳ್ಳು ಹೇಳುತ್ತಿದ್ದವರ ಆಧಾರ ಕಾರ್ಡ್, ಮೊಬೈಲ್‍ಗೆ ಬಂದ ಸಂದೇಶ ಪರಿಶೀಲಿಸಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮನೆ ಒಳ ಹೋಗಿ ಲಸಿಕೆ ನೀಡಿ ಎಂದು ತಾಕೀತು ಮಾಡಿ ಲಸಿಕೆ ಹಾಕಿಸಿದರು.

ಜ್ವರ ಇದೆ ಹೋಗಲಿ ಬಿಡಿ ಸರ್ ಎಂದು ಪಾಲಿಕೆ ಸಿಬ್ಬಂದಿಯೋರ್ವರು ವಿಚಾರಣೆ ವೇಳೆ ಹೇಳುತ್ತಿದ್ದಂತೆ, ಕೆಂಡಾಮಂಡಲರಾದ ಜಿಲ್ಲಾಧಿಕಾರಿ ಬೀಳಗಿ, ನೀವೆಲ್ಲಾ ಲಸಿಕೆ ಕೊಡಿಸುವ ವಿಚಾರವಾಗಿ ಚೆನ್ನಾಗಿ ಕೆಲಸ ಮಾಡಿದ್ದರೆ ಯಾಕ್ ಹಿಂಗ್ ಆಗುತ್ತಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಇನ್ನೂ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರನ್ನು ಕರೆದು ಮಾತನಾಡಿಸಿ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ಹಾಕಿಸುತ್ತಿದ್ದ ವೇಳೆ ಒಬ್ಬ ಯುವಕ ನನಗಿನ್ನೂ 12 ವರ್ಷ. ಆದ್ದರಿಂದ ಲಸಿಕೆ ಪಡೆದಿಲ್ಲ ಎಂದಾಗ, ಜಿಲ್ಲಾಧಿಕಾರಿ ಮಾತನಾಡುತ್ತಾ, ಆಗಲೇ ಗಡ್ಡ ಬಂದಿದ್ದು, ಇನ್ನೂ ನಿನಗೆ 12 ವರ್ಷಾನಾ ಎಂದು ಹೇಳಿ ಹಿಡಿದು ಲಸಿಕೆ ಕೊಡಿಸಿದರು.

ನಮ್ಮ ದೇಶದಲ್ಲೂ ಕ್ವಾರಂಟೈನ್‍ ಏಕಿಲ್ಲ: ನಮ್ಮ ದೇಶದಿಂದ ದುಬೈ ಸೇರಿದಂತೆ, ಇತರೆ ದೇಶಗಳಿಗೆ ಹೋಗುವವ ರನ್ನು ಅಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಯಾಕೆ ಕ್ವಾರಂಟೈನ್ ಮಾಡುತ್ತಿಲ್ಲ. ನೀವು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಬೇಕು. ಈ ಸೋಂಕು ನಮ್ಮ ದೇಶದಿಂದ ಬಂದಿಲ್ಲ. ಹೊರ ದೇಶದಿಂದ ಬಂದಿದೆ. ಹೀಗಾಗಿ ವಿದೇಶಗಳಿಂದ ಬರುವವರ ಮೇಲೆ ನಿಗಾ ಇರಿಸಿ ಎಂದು ಯುವಕನೋರ್ವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸಲಹೆ ನೀಡಿದ. 

ಜಿಲ್ಲಾಧಿಕಾರಿ ಮಾತನಾಡಿ, ಕ್ವಾರಂಟೈನ್ ಮಾಡುತ್ತಿದ್ದಾರೆ. ಬಾ ನೀ ಬಂದು ನಿಮ್ಮ ಪ್ರದೇಶದೊಳಗಿನ ಜನರಿಗೆ ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಿ ಲಸಿಕಾ ಅಭಿಯಾನದ ರಾಯಭಾರಿ ಆಗು ಎಂದು ಜೊತೆಗೆ ಕರೆದುಕೊಂಡು ಮುನ್ನಡೆದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್‌, ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್, ಡಾ. ಮೀನಾಕ್ಷಿ, ಪಾಲಿಕೆಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಭಾಷಾ ನಗರದ ವೈದ್ಯರು, ದಾದಿಯರು ಜಿಲ್ಲಾಧಿಕಾರಿಯೊಂದಿಗೆ ಲಸಿಕೆ ಕೊಡಿಸಲು ಹೆಜ್ಜೆ ಹಾಕಿದರು.

error: Content is protected !!