ಜಗಳೂರಿನ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್
ಹರಪನಹಳ್ಳಿ, ಸೆ.7- ಮೆರವಣಿಗೆ ಇಲ್ಲ, ಡಿಜೆ, ಧ್ವನಿವರ್ಧಕ ಇಲ್ಲ ಎಂದರೆ ಗಣೇಶೋತ್ಸವ ಆಚರಣೆಗೆ ಯಾವುದೇ ಅರ್ಥವಿಲ್ಲ. ಗಣೇಶನನ್ನು 11 ದಿನ ಸ್ಥಾಪನೆಗೆ ಅವಕಾಶ ಮಾಡಿಕೊಡಿ ಎಂದು ವಿಎಚ್ಪಿ ತಾಲ್ಲೂಕು ಅಧ್ಯಕ್ಷ ಎಚ್.ಎಂ. ಜಗದೀಶ್ ಮನವಿ ಮಾಡಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತದಿಂದ ಇಂದು ಆಯೋಜಿಸಿದ್ದ ಶಾಂತಿಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ವರ್ಷ ನಾವು 11 ದಿನ ಗಣೇಶನನ್ನು ಸ್ಥಾಪನೆ ಮಾಡುತ್ತಿದ್ದೆವು. ಈ ಬಾರಿ ಕೇವಲ ಐದು ದಿನಕ್ಕೇ ಸೀಮಿತ ಮಾಡಿರುವುದರಿಂದ ನೋವುಂಟಾಗಿದೆ. ಈಗಿರುವ ನಿಯಮ ಸಡಿಲಿಸುವಂತೆ ಮನವಿ ಮಾಡಿದರು.
ವಿಎಚ್ಪಿ ತಾಲ್ಲೂಕು ಸಂಚಾಲಕ ಅಶೋಕ್ ಮಾತನಾಡಿ, ರಾಜಕೀಯ ಸಮಾರಂಭಗಳಿಗೆ ಇಲ್ಲದ ಕೋವಿಡ್ ನಿಯಮಗಳು ಗಣೇಶ ಹಬ್ಬಕ್ಕೆ ಏಕೆ ? ಎಂದು ಪ್ರಶ್ನೆ ಹಾಕಿದರು. ಪುರಸಭಾ ಸದಸ್ಯ ಜಾಕೀರ್ ಸರ್ಖಾವಸ್ ಮಾತನಾಡಿ, ಪಿಓಪಿ ಗಣೇಶ ಮೂರ್ತಿಗಳಿಗೆ ಅವಕಾಶ ನೀಡದೆ ಮಣ್ಣಿನ ಗಣಪಗಳನ್ನು ಸ್ಥಾಪನೆ ಮಾಡಿ ಪರಿಸರ ಕಾಪಾಡಬೇಕು ಎಂದು ಹೇಳಿದರು.
ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಕಮ್ಮಾರ್ ಮಾತನಾಡಿ, ಹರಪನಹಳ್ಳಿ ಕೋಮು ಸೌಹಾರ್ದತೆಗೆ ಹೆಸರಾಗಿದೆ. ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಸರ್ಕಾರದ ಆದೇಶವನ್ನು ವಿಸ್ತರಣೆ ಮಾಡುವ ಅಧಿಕಾರ ನಮಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿರಾವ್ ಮಾತನಾಡಿ, ಗಣೇಶ ಮೂರ್ತಿಗಳನ್ನು 5 ದಿನಕ್ಕಿಂತ ಹೆಚ್ಚಿಗೆ ಪ್ರತಿಷ್ಠಾಪಿಸಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವ ಮೆಸೇಜ್ಗಳ ಬಗ್ಗೆ ಕಿವಿಗೊಡಬಾರದು ಎಂದು ಕೋರಿದರು.
ತಹಶೀಲ್ದಾರ್ ಎಲ್.ಎಂ. ನಂದೀಶ್ ಮಾತನಾಡಿ, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡುವ ಸಮಿತಿಗಳ ಸದಸ್ಯರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಆದಷ್ಟು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಒಂದು ವಾರ್ಡಿಗೆ ಒಂದೇ ಗಣಪನನ್ನು ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿಗಳ ವಿಸರ್ಜನೆಗೆ ನಾಯಕನ ಕೆರೆ, ಹರಿಹರ ಆಶ್ರಯ ಕಾಲೋನಿ, ಮೈಲಾರ ರಸ್ತೆ ಬಳಿ ಹೀಗೆ ಮೂರು ಕಡೆ ಪುರಸಭೆ ವತಿಯಿಂದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಿಎಚ್ಪಿ ಮುಖಂಡ ಸುರೇಶ್ ಮಾತನಾಡಿದರು. ಪಿಎಸ್ಐ ಸಿ. ಪ್ರಕಾಶ್, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಸದಸ್ಯ ಕಿರಣ ಶಾನ್ಬಾಗ್, ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ, ಎಂ. ಸಂತೋಷ್ ಹಾಗೂ ವಿವಿಧ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.