ಚರಿತ್ರೆಗಳು ಚರ್ಚೆ, ವಿಮರ್ಶೆಗೊಳಪಡಲಿ

ಎವಿಕೆ ಕಾಲೇಜಿನಲ್ಲಿನ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ರಾಜ್ಯ ಪತ್ರಾಗಾರ ಇಲಾಖೆಯ ಉಪ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಅಭಿಮತ

ದಾವಣಗೆರೆ, ಡಿ.1- ಚರಿತ್ರೆಗಳನ್ನು ಮರು ಕಟ್ಟುವ, ವಿಮರ್ಶೆಗೆ ಒಳಪಡಿಸುವ, ಚರ್ಚಿ ಸುವ ಪ್ರಯತ್ನಗಳು ನಡೆಯಬೇಕು  ಎಂದು ರಾಜ್ಯ ಪತ್ರಾಗಾರ ಇಲಾಖೆಯ ಉಪ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಾ ಗಾರ ಇಲಾಖೆ ಸಹಯೋಗದಲ್ಲಿ ಎವಿಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮ ನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ `ದಾವಣಗೆರೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮೂಲ ಆಧಾರ ಇಟ್ಟುಕೊಂಡು ಮಾಡುವ ಸಂಶೋಧನೆಗಳು ದೀರ್ಘಕಾಲ ಉಳಿಯುತ್ತವೆ. ಮುಂದಿನ ಸಂಶೋಧನೆಗಳಿಗೆ ಮಾದರಿಯಾಗುತ್ತವೆ ಎಂದು ಹೇಳಿದರು.

ಸ್ವಾತಂತ್ರ್ಯ ಚಳವಳಿ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರಲಿಲ್ಲ. ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರೂ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಕುರಿತ ಅನೇಕ ದಾಖಲೆಗಳು ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಲಭ್ಯವಿವೆ. ಸಂಶೋಧಕರು ಮೂಲ ಆಧಾರ ಇಟ್ಟುಕೊಂಡು ಸಂಶೋಧಿಸಬೇಕು ಎಂದರು.

ನಾಡು-ನುಡಿಗೆ ಸಂಬಂಧಿಸಿದ ಸರ್ಕಾರ ಹಾಗೂ ಸರ್ಕಾರೇತರ  ದಾಖಲೆಗಳನ್ನು ಸಂರಕ್ಷಿಸುವ ಕೆಲಸವನ್ನು ರಾಜ್ಯ ಪತ್ರಾಗಾರ ಇಲಾಖೆ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು 40 ಲಕ್ಷ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

64 ಹೋರಾಟಗಾರರ ಧ್ವನಿ ಮುದ್ರಿಕೆಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಅಲ್ಲದೆ ಇತ್ತೀಚೆಗೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂಶೋಧಕರಿಗೆ ಇದ್ದಲ್ಲಿಯೇ ಸುಲಭವಾಗಿ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ಹೇಳಿದರು.

ಆರಂಭದಲ್ಲಿ ಕೇವಲ ಮೇಲ್ವರ್ಗಕ್ಕೆ ಸೀಮಿತವಾದ ಚರಿತ್ರೆ ಎಂಬ ಕೂಗು ಎದ್ದಿತ್ತು.  ನಂತರ ನಡೆದ ಸಂಶೋಧನೆಗಳ ಫಲವಾಗಿ ಮದಕರಿ ನಾಯಕ, ಒನಕೆ ಓಬವ್ವ ಸೇರಿದಂತೆ ಅನೇಕ ಹೋರಾಟಗಾರರ ಬಗ್ಗೆ ತಿಳಿಯಿತು. ಆದರೆ  ಈಗ ಆ ನಾಯಕರುಗಳನ್ನು ಸಮುದಾಯಗಳು ಅಪ್ಪಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.

ರಾಜ್ಯ ವಿವಿ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್. ಮುರಿಗೇಂದ್ರಪ್ಪ ಮಾತನಾಡುತ್ತಾ, ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟ ನಡೆಸಿದ ಅನೇಕರು ಇಂದಿಗೂ ನಮ್ಮ ಜಿಲ್ಲೆಯಲ್ಲಿದ್ದಾರೆ. ಕನಿಷ್ಟ ಐವರನ್ನಾದರೂ ಗುರುತಿಸಿ ಸನ್ಮಾನಿಸುವ ಕೆಲಸವಾಗಬೇಕು ಎಂದರು.

ಬ್ರಿಟೀಷರ ಕಾಲದಲ್ಲಿ ಮಲೇಬೆನ್ನೂರು ಬಳಿ  ನಿರ್ಮಿಸಲಾಗಿದ್ದ ಬಾಪೂಜಿ ಹಾಲ್, ಹೊದಿಗೆರೆ ಬಳಿಯ ಷಹಾಜಿ ಭೋಂಸ್ಲೆ ಅವರ ಸಮಾಧಿಗಳ ಬಳಿ ತೆರಳಿ ವಿದ್ಯಾರ್ಥಿಗಳು ಇತಿಹಾಸ ತಿಳಿಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಕೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಆಶಯ ನುಡಿಗಳನ್ನಾಡುತ್ತಾ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಯುವ ಜನಾಂಗ ಸ್ವಾತಂತ್ರ್ಯ ಹೋರಾಟಗಾರರನ್ನು  ಮರೆಯುತ್ತಿರುವ ಹಿನ್ನೆಲೆಯಲ್ಲಿ  ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಹಾಗೂ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಏನೆಲ್ಲಾ ಸಂಶೋಧನೆಗಳನ್ನು ಮಾಡಬಹುದೆಂದು ತಿಳಿಸಿಕೊಡುವ ಉದ್ದೇಶದಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ದಾವಣಗೆರೆ ವಿವಿ ಕುಲಪತಿ ಡಾ.ಶರಣಪ್ಪ ವಿ.ಹಲಸೆ ಕಾರ್ಯಕ್ರಮ ಉದ್ಘಾಟಿಸಿದರು. ದಾವಿವಿ ಇತಿಹಾಸ ವಿಭಾಗದ ಅಧ್ಯಕ್ಷ ಡಾ.ವೆಂಕಟರಾವ್ ಎಂ.ಪಾಲಟಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವನಗೌಡ ಉಪಸ್ಥಿತರಿದ್ದರು.

ಕು.ಪೂಜಾ ಡಿ.ಎಲ್. ಹಾಗೂ ಕು.ಸುಮ ಡಿ.ಎಸ್. ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ವೀಣಾ ಎನ್. ಸ್ವಾಗತಿಸಿದರು. ಕು.ಅಮೂಲ್ಯ ನಿರೂಪಿಸಿದರು. ಡಾ.ಪಿ.ವಿಶ್ವನಾಥ್ ವಂದಿಸಿದರು.

error: Content is protected !!