ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಪಿಎಸ್ಐ ರವಿಕುಮಾರ್ ಸ್ಪಷ್ಟನೆ
ಮಲೇಬೆನ್ನೂರು, ಸೆ.7- ಕೊರೊನಾ ಕಾರಣ ದಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಗಣೇಶೋತ್ಸವವನ್ನು ಆಚರಿಸುವಂತೆ ಮಲೇಬೆನ್ನೂರು ಪಿಎಸ್ಐ ಡಿ.ರವಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಇಂದು ಕರೆದಿದ್ದ ಶಾಂತಿ, ಸೌಹಾರ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸಿದ ನಂತರ ಒಮ್ಮೆಲೇ 20 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮುಖ್ಯವಾಗಿ ಡಿಜೆ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದರು.
ಗಣೇಶ ಮೂರ್ತಿಗಳನ್ನು ತರುವಾಗ ಮತ್ತು ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಮೆರವ ಣಿಗೆ ಮಾಡುವಂತಿಲ್ಲ. ಗಣೇಶ ಮೂರ್ತಿಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ನಿಗದಿ ಮಾಡಿದ ಸ್ಥಳಗಳಲ್ಲಿ ವಿಸರ್ಜಿಸಬೇಕು ಎಂದು ಅವರು ಹೇಳಿದರು.
ಎಎಸ್ಐ ಹನುಮಂತಪ್ಪ, ಪುರಸಭೆ ಮಾಜಿ ಸದಸ್ಯರಾದ ಎ.ಆರೀಫ್ ಅಲಿ, ಯುಸೂಫ್, ನಾಮಿನಿ ಸದಸ್ಯ ಎ.ಕೆ.ಲೋಕೇಶ್, ಮುಖಂಡ ರಾದ ಕೆ.ಜಿ.ಕೊಟ್ರೇಶಪ್ಪ, ಕೆ.ಜಿ.ಪರಮೇಶ್ವರಪ್ಪ, ಕೆ.ಜಿ.ಲೋಕೇಶ್, ಓ.ಜಿ.ಶಿವಕುಮಾರ್, ಹೊಸಳ್ಳಿ ಕರಿಬಸಪ್ಪ, ರಮೇಶ್, ಬಿ.ಸಿದ್ದೇಶ್, ಮುತುವಲ್ಲಿ ಅಕ್ರಂ ಮತ್ತು ವಾಸನ, ಕುಣೆಬೆಳಕೆರೆ, ಮೂಗಿನಗೊಂದಿಯ ಮುಖಂಡರು ಸೇರಿದಂತೆ ಏಕನಾಥೇಶ್ವರ, ಕಾಲಭೈರವ ದೇವಸ್ಥಾನದ ಪದಾಧಿಕಾರಿಗಳು, ಭಜರಂಗ ದಳದ ಕಾರ್ಯಕರ್ತರು ಸಭೆಯಲ್ಲಿದ್ದರು.