ಶಾಲೆ ಆರಂಭವಾದರೂ ಸದ್ಯಕ್ಕೆ ಸೇತುಬಂಧ ಮಾತ್ರ ಸಾಧ್ಯ
ದಾವಣಗೆರೆ, ಸೆ. 6 – ಆರರಿಂದ 8ನೇ ತರಗತಿಯ ಶಾಲೆಗಳು ಸೋಮವಾ ರದಿಂದ ಪುನರಾರಂಭಗೊಂಡಿದ್ದು, ಪೋಷಕರು ಉತ್ಸಾಹದಿಂದ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿದ್ದಾರೆ. ಮಕ್ಕಳು ಶಾಲಾರಂಭದ ಉತ್ಸಾಹದೊಂದಿಗೆ ಮತ್ತೆ ಕಲಿಕೆಯತ್ತ ಮುಖ ಮಾಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನೇರ ಕಲಿಕೆಗೆ ಸಂಪೂರ್ಣ ವಿರಾಮ ಬಿದ್ದಿತ್ತು. 9ರಿಂದ 12ನೇ ತರಗತಿಯ ಶಾಲೆಗಳನ್ನು ಆಗಸ್ಟ್ 23ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈಗ ಸೆಪ್ಟೆಂಬರ್ 6 ರಿಂದ ಆರರಿಂದ 8ನೇ ತರಗತಿಗಳು ಪುನರಾರಂಭಗೊಂಡಿವೆ.
ಮೊದಲ ದಿನದಂದು ಕೊರೊನಾ ಮುನ್ನೆಚ್ಚರಿಕೆಯ ನಡುವೆ, ತಳಿರು, ತೋರಣದೊಂದಿಗೆ ಶಾಲೆಗಳು ಮಕ್ಕಳನ್ನು ಬರ ಮಾಡಿಕೊಂಡಿವೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ಸಿಹಿ ವಿತರಣೆ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಮುಚ್ಚಳಿಕೆ ಬರೆದು ಕೊಡುವುದು ಕಡ್ಡಾಯವಾಗಿತ್ತು. ಸೋಮವಾರ ಹಲವಾರು ಶಾಲೆಗಳಲ್ಲಿ ಪಠ್ಯಪುಸ್ತಕಗಳನ್ನೂ ವಿತರಿಸಲಾಗಿದೆ.
ಪಾಠವಿನ್ನೂ ದೂರ : ಶಾಲೆಗಳು ಆರಂಭವಾಗಿವೆಯಾದರೂ, ಸುದೀರ್ಘ ಕಲಿಕೆ ಅಂತರದಿಂದಾಗಿ ಸಾಕಷ್ಟು ಮಕ್ಕಳು ಹಿಂದಿನ ವರ್ಷದ ಪಾಠಗಳನ್ನು ಅರಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಶಾಲಾರಂಭವಾದರೂ ಹೊಸ ಪಾಠಕ್ಕಿಂತ, ಹಿಂದಿನ ವರ್ಷದ ಪಾಠಗಳನ್ನು ಮನದಟ್ಟು ಮಾಡುವ ಸೇತುಬಂಧವೇ ನಡೆಯುತ್ತಿದೆ. ಕನಿಷ್ಠ ಇನ್ನೊಂದು ತಿಂಗಳ ಕಾಲ ಮಕ್ಕಳಿಗೆ ಹಿಂದಿನ ವರ್ಷದ ಪಾಠಗಳನ್ನೇ ಕಲಿಸಲಾಗುವುದು ಎಂದು ಹಲವಾರು ಶಿಕ್ಷಕರು ತಿಳಿಸಿದ್ದಾರೆ.
ಲೈನ್‌ಗೆ ಬರದ ಆನ್‌ಲೈನ್ : ಆನ್‌ಲೈನ್ ಮೂಲಕ ಪಾಠ ಹೇಳಿಕೊಟ್ಟಿದ್ದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಪರಿಸ್ಥಿತಿ ಹೇಗಾಗಿದೆ ಎಂದರೆ, ಹಲವಾರು ಆರನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ, ವ್ಯಾಕರಣ ಹಾಗೂ ಗಣಿತಗಳನ್ನು ಮೊದಲಿನಿಂದ ಹೇಳಿಕೊಡುವ ಪರಿಸ್ಥಿತಿ ಬಂದಿದೆ ಎಂದು ಶಿಕ್ಷಕರೊಬ್ಬರು ಶಿಕ್ಷಣದ ವಾಸ್ತವಿಕ ಪರಿಸ್ಥಿತಿ ತಿಳಿಸಿದ್ದಾರೆ.
ಪೋಷಕರು, ಮಕ್ಕಳಲ್ಲಿ ಶಾಲಾರಂಭದ ಉತ್ಸಾಹವಿದೆ : ಡಿಡಿಪಿಐ ಪರಮೇಶ್ವರಪ್ಪ
ಮೊದಲ ದಿನದಂದು ಪೋಷಕರು ಹಾಗೂ ಮಕ್ಕಳು ಉತ್ಸಾಹದಿಂದ ಶಾಲಾಗಮನಕ್ಕೆ ಸ್ಪಂದಿಸಿದ್ದಾರೆ. ಪೋಷಕರು ಶಾಲಾರಂಭದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಹೇಳಿದ್ದಾರೆ.
ಹರಿಹರ ವಲಯದಲ್ಲಿ ಮೊದಲ ದಿನ ಕಡಿಮೆ ಮಕ್ಕಳು ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಪೋಷಕರು ಕಾದು ನೋಡುವ ಮನೋಭಾವದಲ್ಲಿದ್ದಾರೆ. ಅವರೂ ಸಹ ಮುಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲಿದ್ದಾರೆ ಎಂದರು.
ಮೊದಲ ದಿನ ಪರಿಸ್ಥಿತಿ ಹೀಗೆಯೇ ಇರುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಸುಧಾರಣೆಯಾಗುತ್ತದೆ. ಪೋಷಕರಿಗೆ ನಾವು ಭರವಸೆ ಹೇಳಿದ್ದೇವೆ. ಸಾಮಾಜಿಕ ಅಂತರ ಸೇರಿದಂತೆ ಕೊರೊನಾದಿಂದ ರಕ್ಷಣೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಿಕ್ಷಕರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದವರು ತಿಳಿಸಿದರು.
ಮೊದಲ ದಿನ 57.88ರಷ್ಟು ವಿದ್ಯಾರ್ಥಿಗಳ ಹಾಜರಿ
ಆರರಿಂದ 8ನೇ ತರಗತಿಯ ಜಿಲ್ಲಾ ವಿದ್ಯಾರ್ಥಿಗಳ ಪೈಕಿ ಶೇ.57.88ರಷ್ಟು ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಹಾಜರಾಗಿದ್ದಾರೆ. ದಾವಣಗೆರೆ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಶೇ.78.08ರಷ್ಟು ಹಾಗೂ ಹರಿಹರದಲ್ಲಿ ಅತಿ ಕಡಿಮೆ ಶೇ.24.81ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳೂ ಸೇರಿದಂತೆ 6ರಿಂದ 8ರವರೆಗೆ ಅಧ್ಯಯನ ಮಾಡುವ 1,103 ಶಾಲೆಗಳಿದ್ದು, ಇಲ್ಲಿ 78,955 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ 45,696 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.ಚನ್ನಗಿರಿ ವಲಯದಲ್ಲಿ ಶೇ.56.32, ದಾವಣಗೆರೆ ಉತ್ತರದಲ್ಲಿ ಶೇ.52.93, ದಾವಣಗೆರೆ ದಕ್ಷಿಣದಲ್ಲಿ ಶೇ.78.08, ಹರಿಹರದಲ್ಲಿ ಶೇ.24.81, ಹೊನ್ನಾಳಿಯಲ್ಲಿ ಶೇ.67.18, ಜಗಳೂರಿನಲ್ಲಿ ಶೇ.53.87ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಜಿಗಳಿಯಲ್ಲಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗತ
ಮಲೇಬೆನ್ನೂರು, ಸೆ.6- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಇಂದು ಜರುಗಿತು.
ಶಾಲೆಗೆ ಸುಣ್ಣ-ಬಣ್ಣ ಬಳಿದು, ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಶಿಕ್ಷಕಿಯರು ವಿದ್ಯಾರ್ಥಿಗಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಸ್ವಾಗತ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಜಿ.ಆರ್. ಚಂದ್ರಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಪತ್ರಕರ್ತ ಪ್ರಕಾಶ್ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಮತ್ತು ಸಿಹಿ ನೀಡಿ ಸ್ವಾಗತ ಕೋರಿದರು.
ಎಸ್ಡಿಎಂಸಿ ಉಪಾಧ್ಯಕ್ಷರಾದ ರಶ್ಮಿ ವಿಜಯ ಭಾಸ್ಕರ್, ಸದಸ್ಯರಾದ ಕೆ.ಎಸ್. ಮಾಲತೇಶ್, ಡಿ.ಪಿ. ಚಿದಾನಂದ್, ಕರೇಗೌಡ, ಶಿಲ್ಪಾ ಬಸವನಗೌಡ, ಮೀನಾಕ್ಷಮ್ಮ, ಮುಖ್ಯ ಶಿಕ್ಷಕ ಕರಿಬಸಪ್ಪ, ಸಹ ಶಿಕ್ಷಕರಾದ ನಾಗೇಶ್, ಶ್ರೀನಿವಾಸ್ ರೆಡ್ಡಿ, ಲೋಕೇಶ್, ಗುಡ್ಡಪ್ಪ, ಲಿಂಗರಾಜ್, ಮಲ್ಲಿಕಾರ್ಜುನ್, ಕುಸುಮ, ದೀಪಾ ಮತ್ತು ಅಡುಗೆ ಸಹಾಯಕರು, ಗ್ರಾಮಸ್ಥರು ಈ ವೇಳೆ ಹಾಜರಿದ್ದರು.
ಪಾಠ ಓದುವುದು, ಬರೆಯುವುದು ಹಾಗೂ ಮಗ್ಗಿಯನ್ನು ಹೇಳಿಕೊಟ್ಟ ನಂತರ ಪಾಠದ ಮುಂದಿನ ಭಾಗ ಸಾಧ್ಯವಾಗಲಿದೆ. ಮಕ್ಕಳ ಕಲಿಕೆಯ ಮಟ್ಟ ಸಾಕಷ್ಟು ಕುಸಿದಿರುವುದರಿಂದ, ಮೂಲ ಕಲಿಕೆಗೆ ಈಗ ಒತ್ತು ನೀಡುತ್ತಿದ್ದೇವೆ ಎಂದವರು ಹೇಳಿದ್ದಾರೆ.
ಪೋಷಕರ ಉತ್ಸಾಹ : ಮಕ್ಕಳನ್ನು ಶಾಲೆಗೆ ಸೇರಿಸಲು 6 ಹಾಗೂ 7ನೇ ತರಗತಿಯ ಪೋಷಕರು ಉತ್ಸಾಹದಿಂದ ಬಂದಿದ್ದಾರೆ. ಆನ್‌ಲೈನ್ ಕಲಿಕೆ ನಿಲ್ಲಿಸಿ ನಿರಂತರವಾಗಿ ಆಫ್‌ಲೈನ್ ಪಾಠ ಮಾಡಿ ಎಂಬುದೇ ಪೋಷಕರ ಒತ್ತಾಯ ಎಂದು ನಗರದ ಗುರುಬಸಮ್ಮ ವಿ. ಚಿಗಟೇರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಸೌಭಾಗ್ಯಮ್ಮ ಹೇಳಿದ್ದಾರೆ.
ಮೂರ್ನಾಲ್ಕು ಮಕ್ಕಳನ್ನು ಬಿಟ್ಟರೆ, ಉಳಿದೆಲ್ಲರೂ ಮೊದಲ ದಿನವೇ ಶಾಲೆಗೆ ಬಂದಿದ್ದಾರೆ. ನಾಳೆ ಎಲ್ಲ ಮಕ್ಕಳು ಶಾಲೆಗೆ ಬರುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.
ಸರ್ಕಾರಿ ಶಾಲೆಯ ಒಲವು : ಈ ವರ್ಷ ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚಾಗಿದೆ. ತಮ್ಮ ಶಾಲೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಶಾಲಾರಂಭಕ್ಕೆ ಮುಂಚೆಯೇ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಕೇಳುತ್ತಲೇ ಇದ್ದರು ಎಂದು ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಕೆ. ಚಂದ್ರಪ್ಪ ಹೇಳಿದ್ದಾರೆ.
15-20 ಮಕ್ಕಳಿಗೆ ಪ್ರತ್ಯೇಕ ಶಾಲಾ ಕೊಠಡಿ ರೂಪಿಸಲಾಗಿದೆ. ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿಕೊಂಡು, ಸಾಮಾಜಿಕ ಅಂತರ ದಲ್ಲಿ ಕೊರೊನಾ ಮುನ್ನೆಚ್ಚರಿಕೆಯಿಂದ ಪಾಠ ಮಾಡುತ್ತಿದ್ದೇವೆ. ಪ್ರತಿದಿನ ತರಗತಿಗೆ ಮುಂಚೆ ಮಕ್ಕಳಿಗೆ ಕೊರೊನಾ ಮುನ್ನೆಚ್ಚರಿಕೆಯ ಬಗ್ಗೆ ಕಡ್ಡಾಯವಾಗಿ ತಿಳಿಸಲಿದ್ದೇವೆ ಎಂದವರು ಹೇಳಿದ್ದಾರೆ.