ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಹಂದರ ಕಂಬದ ಪೂಜೆ ಮಾಡಲಾಯಿತು.
ದಾವಣಗೆರೆ, ಸೆ.7- ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಹಿಂದೂ ಮಹಾ ಗಣಪತಿ ವತಿಯಿಂದ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ಹಂದರ ಕಂಬದ ಪೂಜೆ ನೆರವೇರಿಸಲಾಯಿತು.
ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಸೇರಿದಂತೆ ಪ್ರಮುಖರು ಒಟ್ಟುಗೂಡಿ ಹಂದರ ಕಂಬದ ಪೂಜಾ ಕೈಂಕರ್ಯ ಮಾಡುವುದರ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರನಾಥ್, ಕೊರೊನಾ 3ನೇ ಅಲೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಸರ್ಕಾರವು ಸಾರ್ವಜನಿಕ ಗಣೇಶೋತ್ಸವಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಅದರ ಪ್ರಕಾರವೇ ಸಾರ್ವಜನಿಕ ಗಣೇಶೋತ್ಸವಕ್ಕೆ ಐದು ದಿನಗಳ ಕಾಲಾವಕಾಶ ನೀಡಿದೆ. ಈ ಸಂದರ್ಭದಲ್ಲಿ ಯಾವುದೇ ಮೆರವಣಿಗೆಗೆ ಅವಕಾಶ ನೀಡಿಲ್ಲ. ಹಾಗಾಗಿ ಸರ್ಕಾರದ ಮಾರ್ಗಸೂಚಿಯಂತೆಯೇ ಸರಳವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುವಂತೆ ಮನವಿ ಮಾಡಿದರು.
ಗಣೇಶ ವಿಸರ್ಜನೆಗೆ ಕಾಲ ಮಿತಿಗೆ ವಿರೋಧ:
ಹಿಂದೂ ಮಹಾ ಗಣಪತಿ ಅಧ್ಯಕ್ಷ ಜೊಳ್ಳಿ ಗುರು ಮಾತನಾಡಿ, ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಗೆ ಕಾಲ ಮಿತಿ ನಿಗದಿ ಮಾಡಿ ರುವುದಕ್ಕೆ ನಮ್ಮ ವಿರೋಧವಿದೆ. ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯನ್ನು ಕೇವಲ 3-5 ದಿನಗಳಲ್ಲಿ ವಿಸರ್ಜಿಸಬೇಕೆಂಬ ಸರ್ಕಾರದ ಕಾಲ ಮಿತಿಯ ಆದೇಶ ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರ ಆದಾಯದ ಮೂಲಗಳಾದ ಸಾರಿಗೆ, ರೈಲು ಸಂಚಾರ ಮತ್ತು ಶಾಲಾ – ಕಾಲೇಜುಗಳ ತೆರೆಯಲು ಅನುಮತಿಸಿದ ಮೇಲೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂ ಧಗಳ ಹೇರುವುದು ಎಷ್ಟು ಸರಿ. ಸಾರ್ವಜನಿಕ ಗಣೇಶೋತ್ಸವದಿಂದಷ್ಟೇ ಕೊರೊನಾ ಕಾಡುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ದೂಡಾ ಮಾಜಿ ಅಧ್ಯಕ್ಷರುಗಳಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಬಿ.ಜೆ. ಅಜಯ ಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯರಾದ ಪೈಲ್ವಾನ್ ವೀರೇಶ್, ಶಿವನಗೌಡ ಪಾಟೀಲ್, ಮುಖಂಡರಾದ ಮಾಲತೇಶ್ ರಾವ್ ಜಾಧವ್, ಸತೀಶ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.