ದಾವಣಗೆರೆ, ಸೆ.7- ದಾವಣಗೆರೆ ಲಲಿತ ಕಲೆಗಳ ತವರೂರು. ಅಂದು ವಾಣಿಜ್ಯ ನಗರಿಯಾಗಿದ್ದ ನಗರ ಇಂದು ಶೈಕ್ಷಣಿಕ ನಗರಿಯಾಗುವ ಮೂಲಕ ಇದೀಗ ಕಲಾವಿದರ ನಗರಿಯಾಗುವತ್ತ ಸಾಗುತ್ತಿದೆ. ಅರಸಿ ಬಂದ ಕಲಾವಿದರಿಗೆ ಆಶ್ರಯ ನೀಡುವುದು ದೇವನಗರಿ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ನರಹರಿ ಶೇಠ್ ಸಭಾ ಭವನದ ಎದುರಿಗಿನ ಟಿಎಂಪಿಎನ್ ಕಾಂಪೌಂಡ್ ನಲ್ಲಿ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ ಅವರ `ಅಪ್ಪ ಚಿಂತ್ಯಾಗ, ಮಗಳು ಸಂತ್ಯಾಗ’ ಹಾಸ್ಯಭರಿತ ನಾಟಕದ 51 ನೇ ಪ್ರಯೋಗವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ನಗರದಲ್ಲಿ ಅನೇಕ ನಾಟಕ ಕಂಪನಿಗಳಿಗೆ ಆಶ್ರಯ ನೀಡುವುದಲ್ಲದೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಧೃತಿಗೆಟ್ಟವರಿಗೆ, ಕಂಗೆಟ್ಟವರಿಗೆ ದಾವಣಗೆರೆ ಸುಂದರ ಬದುಕು ಕಟ್ಟಿಕೊಟ್ಟಿದೆ. ಅಶಕ್ತ ಕಲಾವಿದರಿಗೆ ಶಕ್ತಿ ತುಂಬುವ ಕೆಲಸವನ್ನು ಕಲಾಸಕ್ತರು ಮಾಡಬೇಕಾಗಿದೆ ಎಂದರು.
`ಅಪ್ಪ ಚಿಂತ್ಯಾಗ, ಮಗಳು ಸಂತ್ಯಾಗ’ ಇದೊಂದು ಸಾಮಾಜಿಕ ಕಳಕಳಿಯ ಸಂದೇಶ ಸಾರುವ ನಾಟಕವಾಗಿದ್ದು, ಈ ನಾಟಕ ನೋಡುವ ಮೂಲಕ ಕಲಾವಿದರ ಜೀವನಕ್ಕೆ ನೆೇರವಾಗಬೇಕಿದೆ ಎಂದು ಕರೆ ನೀಡಿದರು.
ರಂಗ ಸಂಘಟಕ ಎನ್.ಎಸ್. ರಾಜು, ಉಮೇಶ್, ಪರಮೇಶ್ವರಯ್ಯ, ಬನ್ನಯ್ಯಸ್ವಾಮಿ, ಟಿ.ಎಂ. ವಿನಾಯಕ ಸ್ವಾಮಿ, ಸತೀಶ, ಸಂಘದ ಮಾಲೀಕ ಜಾಲ್ಯಾಳ್ ಮಂಜುನಾಥ್, ಚನ್ನವೀರಯ್ಯಸ್ವಾಮಿ ಮುತ್ತಿನ ಪೆಂಡಿಮಠ, ಜಾಲ್ಯಾಳ್ ಮಹದೇವ ಮತ್ತಿತರರಿದ್ದರು.