ಎಸ್ಸೆಸ್ ಕೇರ್ ಸೆಂಟರ್‌ನಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಡಯಾಲಿಸಿಸ್ ಸೇವೆ

ದಾವಣಗೆರೆ,ಡಿ.1- ನಗರದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್  ಆರಂಭಿಸಲಾಗಿದ್ದು, ಈ ಟ್ರಸ್ಟ್ ಆರಂಭದ ಹಂತವಾಗಿ ಮಹಿಳೆಯ ರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಉಚಿತ ಡಯಾಲಿಸಿಸ್ ಮಾಡಲಾಗುವುದು ಎಂದು ಹಿರಿಯ ಶಾಸ ಕರೂ ಆಗಿರುವ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದ್ದಾರೆ.

ಈ ಸಂಬಂಧ ಈಗಾಗಲೇ ಬಾಪೂಜಿ ವಿದ್ಯಾಸಂಸ್ಥೆಯ ಎರಡೂ ಆಸ್ಪತ್ರೆ ಗಳಿಗೆ ನಿರ್ದೇಶನ ನೀಡಲಾಗಿದೆ. ಆಸ್ಪತ್ರೆಯಲ್ಲಿ ಯಾರಿಗಾದರೂ ಚಿಕಿತ್ಸೆ ನಿರಾಕರಿಸಿದರೆ ನೇರವಾಗಿ ತಮ್ಮ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು.

ಇಲ್ಲಿನ ವಿನೋಬನಗರದ ಸಾರ್ವಜನಿಕ ಸೇವಾ ಸಮಿತಿ ವತಿಯಿಂದ ವಿನೋಬನಗರ ದಲ್ಲಿ ನಿನ್ನೆ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿನೋಬನಗರದ ಸಾರ್ವಜನಿಕ ಸೇವಾ ಸಮಿತಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿದ ಎಸ್ಸೆಸ್, ಈ ಹಿನ್ನೆಲೆಯಲ್ಲಿಯೇ ಸಮಿತಿ ಅಧ್ಯಕ್ಷರೂ ಆಗಿರುವ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ಸತತ ನಾಲ್ಕನೇ ಬಾರಿ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಕನ್ನಡ ನಾಡು-ನುಡಿಗೆ ಅನೇಕ ಜನರು ಹಲವು ತ್ಯಾಗಗಳನ್ನು ಮಾಡಿದ್ದು, ನಾವು- ನೀವೆಲ್ಲರೂ ಕನ್ನಡ ನಾಡು-ನುಡಿಗೆ ಕಂಕಣಬದ್ದರಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿನೋಬನಗರದ ಸಾರ್ವಜನಿಕ ಸೇವಾ ಸಮಿತಿಯ ಅಧ್ಯಕ್ಷರೂ ಆದ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದರು. ಜೊತೆಗೆ ಕೋವಿಶೀಲ್ಡ್ ಲಸಿಕೆಯನ್ನೂ ಸಹ ನೀಡಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಈಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಮತ್ತು ಸಾರ್ವಜನಿಕ ಸೇವಾ ಸಮಿತಿಯ ಕೊಂಡಜ್ಜಿ ಹನುಮಂತಪ್ಪ, ಡಿ.ರವಿಕುಮಾರ್, ಕಾಳಿಂಗರಾಜು, ವೀರಣ್ಣ, ಪರಸಪ್ಪ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಹಿಟ್ಲರ್ ಕಲ್ಯಾಣ ಧಾರಾವಾಹಿ ನಾಯಕಿ ಮಲೈಕಾ ಮತ್ತು ಪಲ್ಲವಿರಾವ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಜಿ.ಸೋಮಶೇಖರ್ ಮಾತನಾಡಿದರು.

ಮಾಜಿ ಮಹಾಪೌರರಾದ ಶ್ರೀಮತಿ ರೇಖಾ ನಾಗರಾಜ್, ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಸ್.ರವಿ, ರಾಮಚಂದ್ರ ರಾಯ್ಕರ್, ಸತೀಶ್, ಯೋಗೀಶ್, ಸುರೇಶ್ ಕುಂಟೆ, ರವಿ, ಬಾಬು, ಶೇಖರ್, ಶಿವಾಜಿರಾವ್, ಪೊಲೀಸ್ ಚಂದ್ರಣ್ಣ, ಪರಮೇಶ್ವರಪ್ಪ, ಕೊಟ್ರೇಶಪ್ಪ, ಮಂಜು, ರಮೇಶ್ ಸೋಲಾರ್, ಸುರೇಶ್ ಉತ್ತಂಗಿ, ಮಂಜುನಾಥ್, ವೀರೇಶ್ ಇನ್ನು ಮುಂತಾದವರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಲ್. ರಕ್ಷಿತಾ, ಗೌರಮ್ಮ ಸಿಸ್ಟರ್, ರೂಪಾ ಸಿಸ್ಟರ್, ನಾರಾಯಣರಾವ್ ಕಾಳೆ, ಪಿ.ನಾಗರಾಜಪ್ಪ, ಕೂಗವ್ವ ಲಕ್ಕಪ್ಪ, ನೀಲಪ್ಪ ಅವರನ್ನು ಸನ್ಮಾನಿಸಲಾಯಿತು.

error: Content is protected !!