ಮಠ ಮತ್ತು ಶ್ರೀಗಳ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬೇಡಿ : ಸತೀಶ್ ಜಾರಕಿಹೊಳಿ
ಮಲೇಬೆನ್ನೂರು, ಡಿ.1- ವಾಲ್ಮೀಕಿ ಜಾತ್ರೆ ಜಾತ್ಯತೀತವಾಗಿರಬೇಕು ಮತ್ತು ಎಲ್ಲಾ ಧರ್ಮ, ಜಾತಿಗಳನ್ನು ಒಳಗೊಂ ಡಿರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯ ಕ್ಷರೂ, ಮಾಜಿ ಸಚಿವರೂ ಆದ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ನಡೆದ ಮಠದ ಟ್ರಸ್ಟ್ ಹಾಗೂ ಸಮಾಜದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲವರು ಸ್ವಾಮೀಜಿ ಮಠದ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಬಹಿರಂಗ ಆರೋಪ ಮಾಡಿದ್ದಾರೆ. ಅದು ತಾಂತ್ರಿಕ ತೊಂದರೆಯಿಂದಾಗಿ ಕೆಲವು ಆಸ್ತಿಗಳು ಸ್ವಾಮೀಜಿ ಹೆಸರಿನಲ್ಲಿ ರಿಜಿಸ್ಟರ್ ಆಗಿರುವ ಬಗ್ಗೆ ಟ್ರಸ್ಟ್ಗೆ ಮಾಹಿತಿ ಇದೆ. ಮಠದ ಎಲ್ಲಾ ಆಸ್ತಿಗಳು, ಹಣಕಾಸಿನ ವ್ಯವಹಾರ ಆಡಿಟ್ನಲ್ಲಿ ಬಂದಿದೆ. ಈ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ಕೊಡಬೇಡಿ. ನಿಮ್ಮ ಏನೇ ಸಮಸ್ಯೆ, ಸಂದೇಹಗಳು ಇದ್ದರೆ ನಮ್ಮ ಬಳಿ ಚರ್ಚಿಸಿ ಎಂದು ಕಿವಿಮಾತು ಹೇಳಿದರು.
ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲೂ ಕೆಲ ವರು ಶ್ರೀಗಳು ಹಾಗೂ ಮಠದ ಬಗ್ಗೆ ಲಘುವಾಗಿ ಹಾಕುತ್ತಿದ್ದಾರೆ, ಇದು ಸರಿಯಲ್ಲ. ಮಠ ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ತಿಂಥಿಣಿ ಬಳಿ ಇರುವ ಮಠದ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಯೋಜನೆ ರೂಪಿಸಲಾಗುವುದು. ಅಲ್ಲಿ ಗುಲ್ಬರ್ಗಾ ವಿಭಾಗದ ಶಾಖಾ ಮಠವನ್ನೂ ಮಾಡಿ, ಸ್ವಾಮೀಜಿಯವರನ್ನು ನೇಮಕ ಮಾಡುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಂದಾಯ ವಿಭಾಗಗಳಲ್ಲೂ ಶಾಖಾ ಮಠ ಮಾಡುವುದಾಗಿ ಸತೀಶ್ ಅವರು ಹೇಳಿದಾಗ, ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.
ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ಕುಟುಂಬದವರು ತೊಂದರೆಯಲಿದ್ದು, ಅವರಿಗೆ ಪ್ರತಿವರ್ಷ ವಾಲ್ಮೀಕಿ ಜಾತ್ರೆಯಲ್ಲಿ ಇಂತಿಷ್ಟು ಹಣವನ್ನು ಅವರ ಜೀವನಾಂಶಕ್ಕೆ ನೀಡೋಣ ಎಂದಾಗಲೂ ಸಭೆ ಸಮ್ಮತಿ ನೀಡಿತು.
ರಾಜನಹಳ್ಳಿ ಮಠದಲ್ಲಿ ಬಂಗಾರದ ವಾಲ್ಮೀಕಿ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ವಿದೆ ಎಂದಾಗ, ಸಭೆಯಲ್ಲಿದ್ದವರು ನಾವು ನಮ್ಮ ಕೈಲಾದಷ್ಟು ಬಂಗಾರ ಕೊಡಿಸುತ್ತೇವೆ. ಮೊದಲು ಆ ಕೆಲಸ ಮಾಡಿ. ದೇಶ – ವಿದೇಶದ ಜನ ರಾಜನಹಳ್ಳಿಗೆ ಬರುವಂತೆ ಮಾಡಿ ಎಂದು ಜಾರಕಿಹೊಳಿ ಅವರಿಗೆ ಮನವಿ ಮಾಡಿದರು.
ಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಚರ್ಚೆಗಳು ಆರೋಗ್ಯ ಪೂರ್ಣವಾಗಿರಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನೂ ಯಾರು ಮಾಡ ಬೇಡಿ. ಮಠದ ಲೆಕ್ಕ ಪಾರದರ್ಶಕವಾಗಿದ್ದು, ಯಾರೂ ಬೇಕಾದರೂ ಬಂದು ನೋಡಿ ಎಂದು ತಾವು ಮಠಕ್ಕೆ ಬಂದಾಗಿನಿಂದ ಇಲ್ಲಿಯವರೆಗಿನ ಎಲ್ಲಾ ಲೆಕ್ಕ ಪತ್ರಗಳನ್ನು ಸಭೆಗೆ ಮಂಡಿಸಿದರು. ಸರ್ಕಾರದಿಂದ ಬಂದಿರುವ ಅನುದಾನಗಳ ವಿವರವನ್ನೂ ನೀಡಿದ ಶ್ರೀಗಳು ಖರೀದಿಸಿರುವ ಆಸ್ತಿಗಳ ಮಾಹಿತಿಯನ್ನು ಕೊಟ್ಟರು.
ಸಭೆಯ ಆರಂಭದಲ್ಲಿ 2022ನೇ ಫೆಬ್ರವರಿ 8 ಮತ್ತು 9 ರಂದು ರಾಜನಹಳ್ಳಿಯಲ್ಲಿ ಜರುಗುವ 4ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಂತರ ರಘುಮೂರ್ತಿ ಅವರು ಹರ್ತಿಕೋಟೆ ವೀರೇಂದ್ರಸಿಂಹರನ್ನು ಜಾತ್ರಾ ಸಮಿತಿ ಸಂಯೋಜಕರನ್ನಾಗಿ ನೇಮಕ ಮಾಡಿದರು.
3ನೇ ವರ್ಷದ ವಾಲ್ಮೀಕಿ ಜಾತ್ರೆಯ ಸ್ಮರಣ ಸಂಪುಟದ ಸಂಪಾದಕ ಡಾ. ಎ.ಬಿ.ರಾಮಚಂದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಠದ ಟ್ರಸ್ಟಿಗಳಾದ ಹೊಸಪೇಟೆ ಜಂಬಯ್ಯ ನಾಯಕ, ದಾವಣಗೆರೆಯ ಬಿ.ವೀರಣ್ಣ, ನಲುವಾಗಲು ನಾಗರಾ ಜಪ್ಪ, ಕೋಲಾರದ ವೆಂಕಟರಮಣ, ಸಮಾಜದ ಮುಖಂಡರಾದ ಹೊದಿಗೆರೆ ರಮೇಶ್, ಜಿಗಳಿ ಆನಂದಪ್ಪ, ಹೂವಿನಮಡು ಚನ್ನಬಸಪ್ಪ ಮತ್ತಿತರರು ಮಾತನಾಡಿದರು.
ಕೆಪಿಎಸ್ಸಿ ಮಾಜಿ ಸದಸ್ಯ ಜಿ.ಟಿ.ಚಂದ್ರಶೇಖರಪ್ಪ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಟ್ರಸ್ಟಿಗಳಾದ ಡಾ. ವಾಲ್ಮೀಕಿ, ಕೊಪ್ಪಳದ ರಾಮಣ್ಣ, ವಿಜಯಪುರದ ಮಲ್ಲಪ್ಪ, ಗದಗಿನ ಸಣ್ಣ ವೀರಪ್ಪ, ಶಿವಮೊಗ್ಗದ ಬಸವರಾಜಪ್ಪ, ಕೆ.ಬಿ.ಮಂಜುನಾಥ್, ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ರತ್ನಾಕರ, ಬಳ್ಳಾರಿ ಜಿಲ್ಲಾಧ್ಯಕ್ಷ ದೊಡ್ಡ ಎರೇಸ್ವಾಮಿ, ಕೆಪಿಸಿಸಿ ಎಸ್ಟಿ ವಿಭಾಗದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಹರಿಹರ ತಾ. ಗ್ರಾ.ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹೊನ್ನಾಳಿ ತಾ.ಮುಖಂಡ ತಿಮ್ಮೇನಹಳ್ಳಿ ಚಂದ್ರಪ್ಪ, ನ್ಯಾಮತಿಯ ಸೋಮಣ್ಣ, ಜಿಲ್ಲಾ ವಾಲ್ಮೀಕಿ ಮಹಿಳಾ ಅಧ್ಯಕ್ಷರಾದ ವಿಜಯಶ್ರೀ ಮಹೇಂದ್ರಕುಮಾರ್, ಹರಿಹರದ ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ರಾಘು ದೊಡ್ಮನಿ, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.