ಧ.ರಾ.ಮ. ಕಾಲೇಜಿನ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್
ವಿದ್ಯಾರ್ಥಿಗಳು ಸಹ ತಮ್ಮ ಜನ್ಮದಿನ ಆಚರಣೆ ಇನ್ನಿತರೆ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡಿ ಸಂತೋಷ ಕೂಟಗಳನ್ನು ಮಾಡುವ ಬದಲು ವಿವೇಕಾನಂದರು, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತಿತರೆ ಸೇನಾನಿಗಳ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು.
– ಬಿ.ಎನ್. ಗಿರೀಶ್, ತಹಶೀಲ್ದಾರ್
ದಾವಣಗೆರೆ, ಸೆ.5- ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಗೌರವಿಸುವ ಮತ್ತು ಅವರ ಸಾಧನೆಗಳನ್ನು ಜನರಿಗೆ ತಲುಪಿಸುವ ಜೊತೆಗೆ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಹೇಳಿದರು.
ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನ ಆವರಣದಲ್ಲಿ ನಿನ್ನೆ ಏರ್ಪಾಡಾಗಿದ್ದ `ಆಜಾದಿ ಕಾ ಅಮೃತ್ ಮಹೋತ್ಸವ ಫಿಟ್ ಇಂಡಿಯಾ ಫ್ರೀಡಂ ರನ್ 2.0′ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ, ಅದರ ಸದ್ಬಳಕೆ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಮಾಡಬಾರದು. ಸಂವಿಧಾನಬದ್ಧ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಾನೂನುಬದ್ಧವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ತಹಶೀಲ್ದಾರ್ ಬಿ.ಎನ್. ಗಿರೀಶ್ ಮಾತನಾಡಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅತಿಥಿ ಗಣ್ಯರಿಗೆ ಹಾರ, ತುರಾಯಿ, ಶಾಲು ಹಾಕುವ ಬದಲು ಉತ್ತಮ ಪುಸ್ತಕವನ್ನು ಉಡುಗೊರೆಯಾಗಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿರುವುದು ತುಂಬಾ ಪ್ರಸ್ತುತ ಎಂದರು.
ಮನೆಗಳು, ರಸ್ತೆಬದಿ, ಬಸ್ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಹಾಗೂ ಅವರ ಸಂಕ್ಷಿಪ್ತ ಮಾಹಿತಿ ಹಾಕುವ ಮೂಲಕ ಸದಾ ಸ್ಮರಣೆ ಮಾಡಿಕೊಳ್ಳುವ ಅವಶ್ಯವಿದೆ ಎಂದು ಹೇಳಿದರು.
ಯುವ ಜನರು ತಮ್ಮ ಆರೋಗ್ಯದ ಕಡೆ ಗಮನಹರಿಸಿದರೆ ಸದೃಢ ಸಮಾಜ ಹಾಗೂ ದೇಶ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ವನಜಾ, ಡಾ. ಎಸ್.ಆರ್. ಗೋಪಾಲಕೃಷ್ಣ ನಾಯ್ಕ, ಉಪನ್ಯಾಸಕರಾದ ಮಂಗಳಗೌರಿ, ಡಾ. ವಿ.ಜಿ. ರುದ್ರೇಶ್ ಮತ್ತಿತರರು ಭಾಗವಹಿಸಿದ್ದರು.