ಹರಿಹರದಲ್ಲಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಸ್. ರಾಮಪ್ಪ
ಹರಿಹರ, ಸೆ. 5- ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವುದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಗುರುಭವನದಲ್ಲಿ ತಾಲ್ಲೂಕು ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಅಧಿಕಾರಕ್ಕೆ ಬಂದಾಗಿನಿಂದ ಸುಮಾರು 5 ಕೋಟಿ ರೂ. ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೆ. ಆದಾಗ್ಯೂ ತಾಲ್ಲೂಕಿನಲ್ಲಿ 90 ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕೊಠಡಿ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು, ನಿವಾರಿಸಲು ಶ್ರಮಿಸುವುದಾಗಿ ಹೇಳಿದರು.
ಆದರ್ಶ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅವರು ಕೊಟ್ಟಿರುವ ಕೊಡುಗೆಯಿಂದಾಗಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿರಲು ಸಾಧ್ಯವಾಗಿವೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಶಿಕ್ಷಕರಿಗೆ ದೇವರ ಸಮಾನವಾದ ಗೌರವ ನೀಡುವುದು ಭಾರತೀಯ ಸಂಸ್ಕೃತಿ. ಮಕ್ಕಳ ಮೇಲೆ ಪೋಷಕರಷ್ಟೇ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ, ಉತ್ತಮ ವ್ಯಕ್ತಿಗಳನ್ನು ರೂಪಿಸುವ ಕರ್ತವ್ಯ ಶಿಕ್ಷಕರದ್ದು ಎಂದರು.
ಕೊರೊನಾ ಸಮಯದಲ್ಲಿ ಅತಿ ಹೆಚ್ಚು ತೊಂದರೆಯಾಗಿದ್ದು ಶೈಕ್ಷಣಿಕ ವರ್ಗಕ್ಕೆ. ಶಾಲಾರಂಭದ ಆಗು-ಹೋಗುಗಳನ್ನು ಚರ್ಚಿಸಿ, ಸರ್ಕಾರ ಶಾಲಾರಂಭಕ್ಕೆ ಅನುಮತಿ ನೀಡಿದೆ. ಶಿಕ್ಷಕರಷ್ಟೇ ಪೋಷಕರೂ ಸಹ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ಹೊತ್ತು ಶಾಲೆಗಳಿಗೆ ಉತ್ತಮ ಹೆಸರು ಬರುವಂತೆ ನೋಡಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಮಾತ ನಾಡಿ, ಹರಿಹರ ತಾಲ್ಲೂಕಿನ ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್ ಮತ್ತು ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್ ಮಾತನಾಡಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಫರೀದಾ ಬೇಗಂ, ಈಶಪ್ಪ ಬೂದಿಹಾಳ್, ಹೆಚ್. ಅಂಜನಾದೇವಿ, ಹೇಮಾ ಟಿ.ವಿ. ಇವರುಗಳನ್ನು ಹಾಗೂ ಹಲವು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ, ಅಕ್ಷರ ದಾಸೋಹ ಇಲಾಖೆ ಅಧಿಕಾರಿ ಪಿ. ಆರ್. ರಾಮಕೃಷ್ಣ, ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶ್ ಉಜ್ಜಮ್ಮನವರ್, ತಾಲ್ಲೂಕು ದೈಹಿಕ ಪರಿವೀಕ್ಷಕಿ ಎನ್.ಪಿ. ಮಂಜುಳಾ, ನೋಡಲ್ ಅಧಿಕಾರಿ ಎಸ್. ಮಂಜುನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ, ಶಿಕ್ಷಕರಾದ ಸಿದ್ದಲಿಂಗಪ್ಪ, ಮಲ್ಲಿಕಾರ್ಜುನ ಅಂಗಡಿ, ತಿಪ್ಪಣ್ಣರಾಜ್, ಶರಣ್ ಕುಮಾರ್, ಬಿ.ಬಿ. ರೇವಣ್ಣನಾಯ್ಕ್, ರಿಯಾಜ್ ಆಹ್ಮದ್, ಗದಿಗೆಪ್ಪ ಹಳೆಮನಿ, ಬಸವರಾಜಯ್ಯ, ಪ್ರಕಾಶ್ ಭಾನುವಳ್ಳಿ, ಕೆ ಶಿವಮೂರ್ತಿ, ಸಾವಿತ್ರಿ ಬಾಯಿ ಫುಲೆ ಸಂಘದ ಜ್ಯೋತಿ, ರೇಣುಕಮ್ಮ, ರೇಣುಕಾಂಬ, ಮಮತಾ, ಸುಮಂಗಳ, ವಿನೋದ, ಪುಷ್ಪಾವತಿ, ಸುಜಾತ ಇತರರು ಹಾಜರಿದ್ದರು.