ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು

ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು - Janathavaniದಾವಣಗೆರೆ, ಸೆ.26- ರಾಜ್ಯದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ದಾಖಲೆ ರಹಿತ ಅನೇಕ ಕುಗ್ರಾಮಗಳಿವೆ. ಅಂತಹ ಗ್ರಾಮಗಳನ್ನು ದಾಖಲೆ ಗ್ರಾಮಗಳನ್ನಾಗಿ (ಕಂದಾಯ ಗ್ರಾಮಗಳು) ಪರಿವರ್ತಿಸಿ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ನೀಡುವಂತೆ ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯಲ್ಲಿರುವ ತಾಂಡಾಗಳು, ಹಾಡಿಗಳು, ಹಟ್ಟಿಗಳು ಮೂಲಸೌಲಭ್ಯಗಳಿಂದ ವಂಚಿತ ವಾಗಿವೆ. ಅವುಗಳನ್ನು ಗುರುತಿಸಿ, ಸಮಾ ಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲು ಸಿದ್ಧರಿದ್ದೇವೆ ಎಂದರು.

ಕರ್ನಾಟಕದಲ್ಲಿ ಜಾರಿಯಾಗಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ದೊರೆತಿದ್ದು, ಇದನ್ನು ದೇಶ ವ್ಯಾಪಿ ಅನ್ವಯವಾಗುವಂತೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಸ್ವಯಂಪ್ರೇರಿತರಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಬೇಕೆಂದು ಮನವಿ ಮಾಡಿದರು.

ಈ ಬಗ್ಗೆ ನೀತಿ ಆಯೋಗದ ಅಧ್ಯಕ್ಷರಿಗೂ, ಲೋಕಸಭಾ ಅಧ್ಯಕ್ಷರಿಗೂ ಮನವಿ ಮಾಡಿಕೊಂಡಿದ್ದು, ಪ್ರಧಾನಿಗಳಿಗೂ ಸಹ ಹಲವು ಬಾರಿ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ಲಂಬಾಣಿ ತಾಂಡಾಗಳ ಜನರ ಜೀವನ ಶೈಲಿ ಏಕರೂಪವಿದ್ದರೂ ಸಹ ಈ ಜನರನ್ನು ಸಮಾಜದ ಮುಖ್ಯವಾಹಿನಿಯಿಂದ ಏಕೆ ದೂರವಿಟ್ಟಿದ್ದೀರಿ? ನಾವೂ ದೇಶದ ಪ್ರಜೆಗಳಲ್ಲವೇ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತೆ ಆಗ್ರಹಿಸಿದರು. 

error: Content is protected !!