ಖರೀದಿ ಕೇಂದ್ರಕ್ಕೆ ಬಾರದ ಭತ್ತದ ರೈತರು

ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ, ಕಟಾವಿಗೆ ಮಳೆ ಅಡ್ಡಿ ಹಿನ್ನೆಲೆ:  ನೋಂದಣಿ ಶೂನ್ಯ

ದಾವಣಗೆರೆ, ನ. 30 – ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಕಳೆದ ನ.25ರಂದು ಜಿಲ್ಲಾಡಳಿತ ಈ ಬಗ್ಗೆ ಪ್ರಕಟಣೆ ಹೊರಡಿಸಿ, ನಾಲ್ಕು ದಿನಗಳಾಗಿವೆ. ಆದರೆ, ಇದುವರೆಗೂ ಒಬ್ಬ ರೈತನೂ ಖರೀದಿ ಕೇಂದ್ರದ ಕಡೆ ತಲೆ ಹಾಕಿಲ್ಲ!

ದಾವಣಗೆರೆ, ಹರಿಹರ, ಹೊನ್ನಾಳಿ
ಹಾಗೂ ಚನ್ನಗಿರಿಗಳಲ್ಲಿ ಒಟ್ಟು ಐದು ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ರೈತರು ಬಂದರೆ, ನೋಂದಣಿ ಮಾಡಿಕೊಂಡರೆ ಖರೀದಿ ಕೇಂದ್ರದ ಗೋದಾಮೊಂದನ್ನು ಗುರುತಿಸಿ, ಅಲ್ಲಿಗೊಂದು ಬ್ಯಾನರ್ ಹಾಕುವ ಉದ್ದೇಶ ಅಧಿಕಾರಿಗಳಿಗೆ ಇದೆ. ಆದರೆ, ರೈತರು ಮಾತ್ರ ನೋಂದಣಿಗೆ ಬಂದಿಲ್ಲ. 

ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಹೆಚ್ಚು ಬೆಲೆ ಇರುವುದು ಹಾಗೂ ಮಳೆಯಿಂದಾಗಿ ಭತ್ತದ ಕಟಾವಿಗೆ ಅಡ್ಡಿಯಾಗಿರುವುದು ರೈತರು ಖರೀದಿ ಕೇಂದ್ರಗಳಿಗೆ ಬರದೇ ಇರುವುದಕ್ಕೆ ಕಾರಣವಾಗಿದೆ. ನಿರಂತರ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಭತ್ತ ಕಟಾವು ಹಾಗೂ ಒಣಗಿಸುವುದು ಹರಸಾಹಸವಾಗುತ್ತಿದೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿದ್ದರೂ, ರೈತರು ಖರೀದಿ ಕೇಂದ್ರಕ್ಕೆ ಸದ್ಯಕ್ಕೆ ಬರದಂತಾಗಿದೆ.

ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ 1,940 ರೂ. ಹಾಗೂ ಗ್ರೇಡ್ – ಎ ಭತ್ತಕ್ಕೆ 1,960 ರೂ. ದರ ನಿಗದಿ ಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಭತ್ತಕ್ಕೆ ಈಗ 2,000 ರೂ.ಗಳಿಂದ ಹಿಡಿದು 2,200 ರೂ.ಗಳವರೆಗೆ ಬೆಲೆ ಇದೆ. ಅಲ್ಲದೇ, ವರ್ತಕರು ಭತ್ತ ಹಸಿ ಇದ್ದರೂ ಖರೀದಿಸಿ ಡ್ರೈಯರ್‌ಗೆ ಹಾಕುತ್ತಾರೆ. ಖರೀದಿ ಕೇಂದ್ರಕ್ಕೆ ತರಬೇಕಾದರೆ, ರೈತರು ತಾವೇ ಒಣಗಿಸಿಕೊಂಡು ತರಬೇಕಿದೆ. ಇದರ ಮೇಲೆ, ಖರೀದಿ ಕೇಂದ್ರಕ್ಕೆ ಭತ್ತ ತರುವ ವೆಚ್ಚ ಕ್ವಿಂಟಾಲ್‌ಗೆ 100-150 ರೂ. ಆಗುತ್ತದೆ. ನಂತರ ಸರ್ಕಾರದಿಂದ ಹಣ ಬಿಡುಗಡೆಯಾಗುವವರೆಗೆ ಕಾಯಬೇಕಿದೆ.

ಇವೆಲ್ಲ ಕಾರಣಗಳಿಂದಾಗಿ, ಮಾರುಕಟ್ಟೆಯಲ್ಲಿ ಖರೀದಿ ಬೆಲೆ ಸರ್ಕಾರದ ನಿಗದಿಗಿಂತ 100 – 150 ರೂ. ಕಡಿಮೆ ಇದ್ದರೂ ಸಹ ಜನ ವರ್ತಕರ ಬಳಿಯೇ ಮಾರಲು ಇಷ್ಟಪಡುತ್ತಾರೆ ಎಂಬುದು ಮಾರುಟ್ಟೆಯ ವಾಸ್ತವ.

ಪ್ರತಿ ವರ್ಷ ಖರೀದಿ ಕೇಂದ್ರ ತೆರೆಯುವ ಹೊಣೆಯನ್ನು ಸರ್ಕಾರ ಯಾವುದಾದರೂ ಸಂಸ್ಥೆಗೆ ವಹಿಸುತ್ತದೆ. ಅವರು ಖರೀದಿ ಕೇಂದ್ರಕ್ಕೆ ವ್ಯವಸ್ಥೆ ಮಾಡುವ ವೇಳೆಗೆ ತಡವಾಗಿರುತ್ತದೆ ಎಂಬ ಆಕ್ಷೇಪಣೆಯೂ ರೈತರಿಂದ ಕೇಳಿ ಬರುತ್ತಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಐದೂ ಖರೀದಿ ಕೇಂದ್ರಗಳಲ್ಲಿ ರೈತರು ಇದುವರೆಗೂ ನೋಂದಣಿ ಮಾಡಿಕೊಂಡಿಲ್ಲ. ಮಾರುಕಟ್ಟೆಯಲ್ಲಿ ದರ ಕಡಿಮೆಯಾದಾಗ ಮಾತ್ರ ರೈತರು ನಮ್ಮ ಬಳಿ ಬರುತ್ತಾರೆ. ರೈತರು ನೋಂದಣಿ ಮಾಡಿಸಿಕೊಂಡರೆ, ಮಾರ್ಗಸೂಚಿಗಳ ಪ್ರಕಾರ ಖರೀದಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಈ ಬಗ್ಗೆ ಮಾತನಾಡಿದ್ದು, ಈಗ ಭತ್ತ ಕಟಾವು ಮಾಡುವುದೇ ಕಷ್ಟವಿದೆ. ಮಳೆಯಿಂದ ಭತ್ತ ಚಾಪೆ ಹಾಸಿದಂತಾಗಿದೆ. ಒಂದು ಗಂಟೆಗೆ ಆಗುವ ಕಟಾವಿಗೆ ಈಗ ಮೂರು ಗಂಟೆ ಆಗುತ್ತಿದೆ. ಒಣಗಿಸುವುದೂ ಕಷ್ಟವಾಗುತ್ತಿದೆ. ಈ ಕಾರಣದಿಂದಾಗಿಯೇ ಹೆಚ್ಚು ಭತ್ತ ಮಾರುಕಟ್ಟೆಗೆ ಬರುತ್ತಿಲ್ಲ ಎಂದಿದ್ದಾರೆ.

ಭತ್ತ, ಮೆಕ್ಕೆಜೋಳ, ಶೇಂಗಾ, ಕಡ್ಲೆಕಾಳು, ರಾಗಿ, ಜೋಳ, ಸೂರ್ಯಕಾಂತಿ ಇತ್ಯಾದಿ ಬೆಳೆಗಳ ಮಾರಾಟದ ಅವಧಿ ಸಾಮಾನ್ಯವಾಗಿ 2 ತಿಂಗಳಿರುತ್ತದೆ. ಈ ಎಲ್ಲ ಬೆಳೆಗಳ ಖರೀದಿಗೆ ನಿರಂತರ ವ್ಯವಸ್ಥೆ ಇರಬೇಕು. ಯಾವಾಗ ಬೇಕಾದರೆ ಆಗ ಖರೀದಿ ಕೇಂದ್ರ ತೆರೆದರೆ ಹೆಚ್ಚು ಪ್ರಯೋಜನವಾಗದು ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!