ಶಿಕ್ಷಕರು ಮಕ್ಕಳ‌ ಭವಿಷ್ಯ ರೂಪಿಸುವ ಜ್ಞಾನ ಶಿಲ್ಪಿಗಳು

ಜಗಳೂರಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಸೆ.5- ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜ್ಞಾನದ ಶಿಲ್ಪಿಗಳಂತೆ, ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್  ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 133 ನೇ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮನುಷ್ಯ ಊಟ ಮಾಡಿದ್ದನ್ನು ಮರೆಯಬಹುದು, ಆದರೆ ವಿದ್ಯಾ ದಾನವನ್ನು ತನ್ನ ಜೀವಿತಾವಧಿಯವರೆಗೂ ಪ್ರತಿಯೊಬ್ಬರೂ ಸ್ಮರಿಸುತ್ತಾರೆ. ಶಿಕ್ಷಕ ವೃತ್ತಿ ತುಂಬಾ ಮಹತ್ವದ ವೃತ್ತಿ ಎಂದರು. ನನ್ನ ಆಡಳಿತಾವಧಿಯಲ್ಲಿ ಸತತ 3 ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ ಎಂಬುದನ್ನು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ. ಇದು ಹೆಮ್ಮೆಯ ಸಂಗತಿ.

ಅಭಿವೃದ್ಧಿ ಕೆಲಸಗಳು : 2‌ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸುಂದರ ವಿನ್ಯಾಸದ ರಂಗಮಂದಿರ ಕಾಮಗಾರಿ ಪ್ರಗತಿಯಲ್ಲಿದೆ. ಸ್ವಯಂಪ್ರೇರಿತವಾಗಿ ಗುರುಭವನ ದುರಸ್ತಿಗೊಳಿಸಿರುವೆ ಎಂದರು.

ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳನ್ನು ತುಂಬಿಸುವ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಶೀಘ್ರದಲ್ಲಿ ಕೆರೆಗಳು ಭರ್ತಿಯಾಗ ಲಿವೆ. ಭದ್ರಾ ಮೇಲ್ದಂಡೆ ಯೋಜನೆ ಶಂಕುಸ್ಥಾಪನೆಯನ್ನು ಮುಂದಿನ ತಿಂಗಳು ದಸರಾ ಹಬ್ಬದೊಳಗಾಗಿ ಮುಖ್ಯಮಂತ್ರಿಗಳ‌ ನೇತೃತ್ವದಲ್ಲಿ ನೆರವೇರಿಸಲಾಗು ವುದು ಎಂದು ಶಾಸಕರು ಹೇಳಿದರು.

ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಶಿಕ್ಷಕರು ಜ್ಞಾನ ಭಂಡಾರವನ್ನೇ ಧಾರೆ ಎರೆದು ಪ್ರೇರಣೆ ಯಾಗಿರುವ ಬಡತನದಲ್ಲಿರುವ ಶಿಕ್ಷಕರಿಗೆ ಸದಾ ನೆರವಾಗುವೆ. ನಿವೃತ್ತಿ ಹೊಂದಿದ ನಾಲ್ವರು ಶಿಕ್ಷಕರಿಗೆ ನಿವೇಶನ ಕಲ್ಪಿಸಲಾಗು ವುದು ಎಂದು ಭರವಸೆ ನೀಡಿದರು.

ಶಿಕ್ಷಕರ ಸಂಘದ ಲಿಖಿತ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ಮುಂಬರುವ ಶಿಕ್ಷಕರ ದಿನಾಚರಣೆ ವೇಳೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ಥಳಿ ನಿರ್ಮಿಸಲಾ ಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರ ಪತ್ನಿ ಶ್ರೀಮತಿ ಇಂದಿರಾ ರಾಮಚಂದ್ರ, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಲಲಿತಾ ಶಿವಣ್ಣ, ಸದಸ್ಯರಾದ ನವೀನ್, ರೇವಣ್ಣ, ಪಾಪಲಿಂಗಪ್ಪ, ನೌಕರರ ಸಂಘದ ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಇಓ ಲಕ್ಷ್ಮೀಪತಿ, ಪ.ಪಂ‌ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಬಿಇಓ ದಾರುಕೇಶ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ತಾ.ಪಂ ಮಾಜಿ ಸದಸ್ಯ ಸಿದ್ದೇಶ್, ಸೇರಿದಂತೆ, ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!