ಛಾಯಾಗ್ರಾಹಕ ವೃತ್ತಿ ಶ್ರೇಷ್ಠವಾದದ್ದು

ಛಾಯಾ ಸಂಭ್ರಮ ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರನಾಥ್

ದಾವಣಗೆರೆ, ಸೆ.5- ರಾಮಾಯಣ, ಮಹಾಭಾರತ ಕಾಲದಿಂದಲೂ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬಂದಿರುವ ಛಾಯಾಗ್ರಾಹಕರು ಗೌರವದಿಂದ ಬದುಕು ಸಾಗಿಸುತ್ತಿದ್ದು, ಛಾಯಾಗ್ರಹಕರ ವೃತ್ತಿ ಶ್ರೇಷ್ಠವಾದುದು ಎಂದು   ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ  ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಸಂಘ ಹಾಗೂ ಫೋಟೋ ಗ್ರಾಫರ್ಸ್ ಯೂತ್ಸ್ ವೇಲ್‌ಫೇರ್ ಅಸೋಸಿಯೇಷನ್ ವತಿಯಿಂದ 182 ನೇ ವಿಶ್ವ ಛಾಯಾಗ್ರಾಹಣ ದಿನಾಚರಣೆ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಛಾಯಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದರೂ ಸಹ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದ್ದು, ಜನರಿಗೆ ಇನ್ನೂ ಉತ್ತಮ ಸೇವೆಯನ್ನು ಛಾಯಾಗ್ರಾಹಕರು ನೀಡಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಬದುಕಿನ ಅಪರೂಪದ ಕ್ಷಣಗಳನ್ನು ಛಾಯಾಚಿತ್ರದ ಮೂಲಕ ಕಟ್ಟಿಕೊಡುವ ಛಾಯಾಗ್ರಾಹಕ ವೃತ್ತಿ ವಿಶಿಷ್ಟ ಹಾಗೂ ಅಮೂಲ್ಯವಾದುದು ಎಂದು ಹೇಳಿದರು.

ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಇಂದಿನ ಸುಂದರ ಕ್ಷಣಗಳನ್ನು ನಾಳೆಯ ಸವಿ ನೆನಪುಗಳನ್ನಾಗಿಸುವ ಛಾಯಾಗ್ರಾಹಕರು ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂದರು.

ಸಮಾಜದಲ್ಲಿ ಛಾಯಾಗ್ರಾಹಕ ವೃತ್ತಿ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದ್ದು, ತಮ್ಮಲ್ಲಿ ಎಷ್ಟೇ ನೋವುಗಳಿದ್ದರೂ ಸಮಾಜದ ಪ್ರತಿಯೊಬ್ಬರನ್ನೂ ನಗಿಸಲಿಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಹೇಳಿದರು.

ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿದರು. ದಾವಣಗೆರೆ ಯೂತ್ ವೆಲ್‌ಫೇರ್ ಅಧ್ಯಕ್ಷ ಹೆಚ್.ಕೆ.ಸಿ. ರಾಜು ಅಧ್ಯಕ್ಷತೆ ವಹಿಸಿದ್ದರು. 

ಛಾಯಾಗ್ರಾಹಕರ ಸಂಘದ ವಿಜಯ್ ಜಾಧವ್, ತಿಪ್ಪೇಸ್ವಾಮಿ, ದುಗ್ಗಪ್ಪ ಎಸ್. ಕಡೇಮನಿ, ಏಕನಾಥ್ (ತಿಲಕ್), ಪಾಲಿಕೆ ನಾಮಿನಿ ಸದಸ್ಯ ಶಿವನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಭೂಮಿಕ ಮತ್ತು ಬಿಂದುಶ್ರೀ ಪ್ರಾರ್ಥಿಸಿದರು. ಏಕನಾಥ್ ಸ್ವಾಗತಿಸಿದರು. ಎ.ಬಿ. ರುದ್ರಮ್ಮ ನಿರೂಪಿಸಿದರು. 

error: Content is protected !!