ಕರವೇಯಿಂದ ಪಾಲಿಕೆಗೆ ಮುತ್ತಿಗೆ: ಕಪ್ಪು ಮಸಿ ನೀಡಿ ಪ್ರತಿಭಟನೆ
ದಾವಣಗೆರೆ, ನ.30- ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಂಗ್ಲ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರ ಪಾಲಿಕೆಗೆ ಮುತ್ತಿಗೆ ಹಾಕಿ, ಕಪ್ಪು ಮಸಿ ನೀಡುವ ಮೂಲಕ ಪ್ರತಿಭಟಿಸಲಾಯಿತು.
ಪಾಲಿಕೆ ಮುಂಭಾಗ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಆಂಗ್ಲ ನಾಮಫಲಕ ತೆರವಿಗಾಗಿ ಹಲವು ಬಾರಿ ಒತ್ತಾಯಿಸಿದರೂ, ಪಾಲಿಕೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿರುವ ಆಂಗ್ಲ ನಾಮಫಲಕಕ್ಕೆ ಕಪ್ಪು ಮಸಿ ಬಳಿಯಬೇಕು ಎಂದು ಉಪ ಆಯುಕ್ತರಿಗೆ ಕಪ್ಪು ಮಸಿ ನೀಡಿ, ಈ ವಿಚಾರದಲ್ಲಿ ಮೌನಕ್ಕೆ ಶರಣಾಗಬಾರದು ಎಂದು ಒತ್ತಾಯಿಸಿದರು.
ನಗರದಲ್ಲಿ ಆಂಗ್ಲ ನಾಮಫಲಕಗಳು ಹೆಚ್ಚಾಗಿ ರಾರಾಜಿಸುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಪೌರರು ಮತ್ತು ಆಯುಕ್ತರ ಗಮನಕ್ಕೆ ತರಲಾಗಿದೆ. ಸರ್ಕಾರ ಕನ್ನಡದ ಕಾಯಕ ವರ್ಷ ಎಂದು ಆದೇಶಿಸಿದ್ದು, ಎಲ್ಲಾ ಸರ್ಕಾರಿ ಕಚೇರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕಗಳಲ್ಲಿ ಹಾಕಲೇಬೇಕು ಎಂದು ರಾಮೇಗೌಡ ತಿಳಿಸಿದರು.
ನಗರದಲ್ಲಿ ಹಗಲು-ರಾತ್ರಿಯೆನ್ನದೇ ಬೀದಿ ನಾಯಿಗಳು, ಹಂದಿಗಳ ದಾಳಿಯಿಂದ ಸಾರ್ವಜನಿ ಕರು ಆಸ್ಪತ್ರೆ ಸೇರುವಂತಾಗಿದೆ. ಮಕ್ಕಳು ಬೀದಿ ನಾಯಿಗಳ ದಾಳಿಗೆ ತುತ್ತಾದ ನೂರೆಂಟು ಉದಾ ಹರಣೆಗಳಿವೆ. ಈ ರೀತಿ ಆಗುವುದಕ್ಕೆ ಅಧಿಕಾರಿಗಳೇ ಹೊಣೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಕೋರಿದರು.
ಪ್ರತಿಭಟನೆಯಲ್ಲಿ ವೇದಿಕೆ ಮುಖಂಡರಾದ ಪರಮೇಶ್ವರ, ಧರ್ಮರಾಜ್, ಎಂ.ಡಿ. ರಫೀಕ್, ಜಬೀವುಲ್ಲಾ, ಶೌಕತ್, ಮುಬಾರಕ್, ಅಫ್ಜಲ್, ಬಸಮ್ಮ, ಹಬೀದಾ ಭಾನು, ಲಲಿತ, ಸುಜಾತ, ಗೋಪಾಲ ದೇವರಮನೆ, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.