ಮಲೇಬೆನ್ನೂರಿನಲ್ಲಿ ವಾಸವಿ ಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
ಮಲೇಬೆನ್ನೂರು, ಸೆ.3- ಇಲ್ಲಿನ ವೀರ ಭದ್ರೇಶ್ವರ ದೇವಾಲಯವು ಭಾರತದ ಸನಾ ತನ ಧರ್ಮದ ಯತಿವರ್ಯರ ವಿಗ್ರಹಗಳುಳ್ಳ ಪ್ರಾಚೀನ ದೇವಸ್ಥಾನದಂತಿದೆ ಎಂದು ಬೆಂಗ ಳೂರಿನ ಆರ್ಯವೈಶ್ಯ ಸಮಾಜದ ವಾಸವಿ ಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಂದೇಶದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ, ಭದ್ರಕಾಳಿ, ಮಹಾಗಣಪತಿ, ನಾಗಪರಿವಾರ, ಕಾಲಭೈರವ ದೇವಸ್ಥಾನಗಳಿಗೆ ಇಂದು ಭೇಟಿ ನೀಡಿ, ನಂತರ ಭಕ್ತರನ್ನು ದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹಲವಾರು ವರ್ಷಗಳ ನಂತರ ಜೀವನ ಶೈಲಿ ಬದಲಾಗುವುದರಿಂದ ನಿರ್ಮಾಣಗೊಂಡ ದೊಡ್ಡ ದೊಡ್ಡ ಮಾಲ್ಗಳಿಗೆ, ಕಟ್ಟಡಗಳಿಗೆ ಭವಿಷ್ಯವಿಲ್ಲ.
ಆದರೆ, ಕಲ್ಲಿನ ದೇವಾಲಯ ಸನಾತನವಾಗಿದ್ದು, ಸೂರ್ಯ ಚಂದ್ರರು ಇರುವ ತನಕ ಶಾಶ್ವತವಾಗಿರುತ್ತದೆ ಎಂದು ಪ್ರತಿಪಾದಿಸಿದರು. ನಿರಂತರ ದೇವರ ದರ್ಶನ ಮತ್ತು ಚಿಂತನೆಯಿಂದ ಧನಾತ್ಮಕ ಶಕ್ತಿ ಲಭಿಸುತ್ತದೆ. ಇಲ್ಲಿ ಆಗಾಗ್ಗೆ ಶ್ಲೋಕ, ಸ್ತೋತ್ರ ಮತ್ತು ಸತ್ಸಂಗ ಆಯೋಜಿಸುವುದರಿಂದ ಕ್ಷೇತ್ರದ ಮಹತ್ವ ಇಮ್ಮಡಿಗೊಳ್ಳುತ್ತದೆ ಎಂದು ಸ್ವಾಮೀಜಿ ಸಲಹೆ ನೀಡಿದರು.
ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಆರುಣ್ ಮಾತನಾಡಿ, ಆರ್ಯವೈಶ್ಯ ಸಮಾಜದ ಸ್ವಾಮೀಜಿಗಳು ರಾಜ್ಯದ 21 ಜಿಲ್ಲೆಗಳಲ್ಲಿ ಸಮಾಜ ಸಂಘಟನೆಗೆ ಕೊರೊನಾ ಅವಧಿಯಲ್ಲೂ ಸಹ ಪ್ರವಾಸ ಮಾಡಿ ಸೀಮಿತ ಭಕ್ತರನ್ನು ಭೇಟಿ ಮಾಡಿದ್ದಾರೆ ಎಂದರು.
ವೀರಭದ್ರೇಶ್ವರ ದೇವಾಲಯದ ಉಪಾಧ್ಯಕ್ಷ ಬಿ. ಚಿದಾನಂದಪ್ಪ ಸ್ವಾಗತಿಸಿದರು.
ಆರ್ಯವೈಶ್ಯ ಸಮಾಜದ ಭೂಪಾಳಂ ಶಶಿಧರ್, ಮುರುಳಿ, ಅಮರ್, ಜಿಗಳಿ, ಮಲೇಬೆನ್ನೂರು, ಕೊಕ್ಕನೂರು ಆರ್ಯವೈಶ್ಯ ಸಮಾಜದ ಅಧ್ಯಕ್ಷರುಗಳಾದ ಹನುಮಂತ ಶ್ರೇಷ್ಠಿ, ಶ್ರೀಪಾದ ಶ್ರೇಷ್ಠಿ, ಎಂ.ಕೆ. ರಾಮಶ್ರೇಷ್ಠಿ, ದೇವಸ್ಥಾನದ ಪದಾಧಿಕಾರಿಗಳಾದ ಬಿ. ನಾಗೇಶಣ್ಣ, ಬಿ. ಉಮಾಶಂಕರ್, ಬಿ. ಮಲ್ಲೇಶ್, ಬಿ.ಎಂ. ಹರ್ಷ, ಶಂಭು ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.