ದಾವಣಗೆರೆ, ಸೆ.5- ನಗರದ ಎಂಸಿಸಿ `ಬಿ’ ಬ್ಲಾಕ್ನಲ್ಲಿನ ಕೆ.ವಿ.ಶೆಟ್ಟಿ ಪಾರ್ಕ್ನಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮತ್ತು ಸ್ಥಳೀಯರು ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಿದರು.
ಶಿಕ್ಷಕ ಕೆ.ಟಿ. ಜಯಪ್ಪ, ನಿಟ್ಟುವಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕರಿಬಸಪ್ಪ, ಸಹಾಯಕ ಪ್ರಾಧ್ಯಾಪಕ ಜಯರಾಜ್ ಎಂ. ಚಿಕ್ಕಪಾಟೀಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಗದೀಶ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪಾಲಿಕೆಯ ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಗಣೇಶ್ ಹುಲ್ಲುಮನಿ, ಸೈಯದ್ ಚಾರ್ಲಿ, ಇಟ್ಟಿಗುಡಿ ಮಂಜುನಾಥ್, ಪಾಮೇನಳ್ಳಿ ನಾಗರಾಜ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಉದಯ್ ಕುಮಾರ್, ಸಾಗರ್ ಎಲ್.ಎಂ.ಹೆಚ್. ನೇತೃತ್ವದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ತಂದೆ – ತಾಯಿ ಮತ್ತು ಶಿಕ್ಷಕರ ಕೈಯಲ್ಲಿರುತ್ತದೆ. ಗುರು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವರು. ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ, ಅವರು ಸರಿದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ವಿದ್ಯೆಯಿಂದ ದೇಶದ ಅಭಿವೃದ್ಧಿ, ಸಮಾಜದ ಸುಧಾರಣೆ ಸಾಧ್ಯ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ತಾಯಿಯೇ ಮೊದಲ ಗುರು. ಹಾಗಾಗಿ ಮಕ್ಕಳಿಗೆ ಚಿಕ್ಕಂದಿ ನಲ್ಲಿಯೇ ಸಂಸ್ಕಾರ ನೀಡುವಂತಹ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಕೆ.ಟಿ.ಜಯಪ್ಪ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ. ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಹಿರಿಯರಿಗೆ ಗೌರವ ನೀಡುವುದು, ಭಯ, ಭಕ್ತಿ ಬೆಳೆಸಬೇಕು. ಉತ್ತಮ ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಕರಿಬಸಪ್ಪ ಮಾತನಾಡಿ, ಶಿಕ್ಷಣ ಅನ್ನೋದು ಒಂದು ಬೆಳಕು. ಈ ರೀತಿಯ ಬೆಳಕು ಮೊಟ್ಟ ಮೊದಲು ಮನೆಯಿಂದಲೇ ಪ್ರಾರಂಭವಾಗಬೇಕು. ಮಕ್ಕಳಿಗೆ ಪೋಷಕರು ಮನೆಯಲ್ಲಿಯೇ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ಎಂಸಿಸಿ ಬಿ ಬ್ಲಾಕ್ ನ ಭರತ್ ಮೈಲಾರ್ ಮಾತನಾಡಿ, `ಶಿಕ್ಷಣ’ ಸಮಾಜ ಸುಧಾರಣೆ ಮಾಡುವ ಅತ್ಯಂತ ಪ್ರಮುಖ ಅಸ್ತ್ರ. ಸಮಾಜದಲ್ಲಿ ವಿದ್ಯಾವಂತರಿಂದ ಮಾತ್ರ ಉತ್ತಮ ಭವಿಷ್ಯ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಎಂಸಿಸಿ `ಬಿ’ ಬ್ಲಾಕ್ನ ಕಾರ್ಯಕರ್ತರಾದ ರಾಜು, ಪ್ರಮೋದ್ ಕೆ. ವಿ. ಆಚಾರ್, ನಿಖಿಲ್, ಮನೀಶ್, ಕೆ. ಬಿ. ಮಂಜುನಾಥ್, ಕೆ. ಎಂ. ಬಸವರಾಜ್, ಮೈಲಾರಪ್ಪ, ದಫೇದಾರ್ ರಮೇಶ್, ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.
ಮುಂದುವರೆದ ಮನೆ ಬಾಗಿಲಿಗೆ ನಿಮ್ಮ ಸೇವಕ…!
ಇನ್ನು ಜನರ ಸಂಕಷ್ಟ ಆಲಿಸುವ ಗಡಿಗುಡಾಳ್ ಮಂಜುನಾಥ್ ಅವರ ಹೊಸ ಪರಿಕಲ್ಪನೆಯ `ಮನೆ ಬಾಗಿಲಿಗೆ ನಿಮ್ಮ ಸೇವಕ’ ಕಾರ್ಯಕ್ರಮ ಇಂದೂ ಮುಂದುವರೆಯಿತು. ಸ್ವಚ್ಛತೆ ಕಾರ್ಯ, ಸಸಿಗಳನ್ನು ನೆಡುವ ಮೂಲಕ, ಶಿಕ್ಷಕರನ್ನು ಸನ್ಮಾನಿಸಿ, ಅರ್ಥಪೂರ್ಣವಾಗಿ ಅಭಿಯಾನ ನಡೆಸಿದರು.