ಜಗಳೂರು, ಸೆ.3- ಯುವಕರು ದುಶ್ಚಟಗಳಿಂದ ದೂರವಾಗಿ, ಸದೃಢರಾಗಿ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಸಲಹೆ ನೀಡಿದರು.
ತಾಲ್ಲೂಕಿನ ಸಿದ್ಧಯ್ಯನಕೋಟೆ ಗ್ರಾಮದ ಸಿಆರ್‌ಪಿಎಫ್ ಯೋಧರಾದ ನಾಗರಾಜ್ ಹಾಗೂ ಕೊಡಗು ಜಿಲ್ಲೆ ಸೋಮವಾರಪೇಟೆಯ ವಿಲಿಯಂ ಲೊಹೋ ಅವರ ನಿವೃತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯಾವುದೇ ಹುದ್ದೆ ಅಲಂಕರಿಸಲು ಶಿಕ್ಷಣ ಬಹು ಮುಖ್ಯವಾಗಿದೆ. ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಯೋಧ ನಾಗರಾಜ್ ಮಾತನಾಡಿ, 1981ರಲ್ಲಿ ಜನಿಸಿ, ಸಿದ್ಧಯ್ಯನಕೋಟೆ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ನಾಲಂದ ಪದವಿಪೂರ್ವ ಕಾಲೇಜಿನಲ್ಲಿ ಪಿ ಯುಸಿ ಮುಗಿಸಿ, 2000 ರಲ್ಲಿ ಸೇವೆಗೆ ಸೇರ್ಪಡೆ ನಂತರ 2003 ರಲ್ಲಿ ಜಮ್ಮು ಕಾಶ್ಮೀರ್, 2006 ಅಸ್ಸಾಂ, 2008ರಲ್ಲಿ ಅಯೋಧ್ಯ ರಾಮ ಮಂದಿರ, 2009 ಛತ್ತೀಸ್ ಘಡ್, 2010 ರಿಂದ 2017 ದೆಹಲಿ, ಪುನಃ, ಜಮ್ಮು ಕಾಶ್ಮೀರ ದಲ್ಲಿ ನಿವೃತ್ತಿಯಾಗಿ ಯಾವುದೇ ಸಮಸ್ಯೆಗಳಿಲ್ಲದೆ ಮರಳಿ ಸ್ವಗ್ರಾಮಕ್ಕೆ ಆಗಮಿಸಿರುವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಶಿಕ್ಷಕ ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಸೈನಿಕ, ಶಿಕ್ಷಕ ಮತ್ತು ರೈತ ಮೂರು ಜನರ ಸೇವೆ ಅಪಾರವಾಗಿದೆ.
ಅನ್ನ ನೀಡುವುದು ರೈತನಾದರೆ, ಭವಿಷ್ಯದ ದೇಶ ನಿರ್ಮಾತೃಗಳನ್ನು ಒದಗಿಸುವ ಪವಿತ್ರ ವೃತ್ತಿ ಶಿಕ್ಷಕರದ್ದಾಗಿದೆ ಎಂದರು. ಇದೇ ವೇಳೆ ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ 70 ಅಂಕ ಗಳಿಸಿ 7 ಪುಸ್ತಕ ಪಡೆದ ಗ್ರಾಮದ ವಿದ್ಯಾರ್ಥಿನಿ ಸೌಂದರ್ಯ ಅವರನ್ನು ಸನ್ಮಾನಿಸಿ, ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್ ಯೋ ಧ ರಾಘವೇಂದ್ರ , ನಿವೃತ್ತ ಯೋಧ ಜಯದೇವ ನಾಯ್ಕ, ಗ್ರಾ.ಪಂ. ಸದಸ್ಯರಾದ ದೇವರಾಜ್, ಜ್ಯೋತಿ ಲಿಂಗಪ್ಪ, ಕೊಟ್ರೇಶ್, ಶರಣಪ್ಪ ಮೇಸ್ತ್ರಿ, ಮಹಮ್ಮದ್ ರಸೂಲ್, ಶರಣಪ್ಪ, ಮುಖಂಡ ರಾದ ಯು.ಜಿ.ಶಿವಕುಮಾರ್, ಭೀಮಣ್ಣ, ಪ್ರಭು ಬಣಕಾರ್, ಓಬಣ್ಣ, ಮಹಾಂತೇಶ್, ಅಂಜಿನಪ್ಪ, ಚೌಡೇಶ್, ಸತೀಶ್, ಶಿಕ್ಷಕರಾದ ಹನುಮಂತಪ್ಪ, ಪ್ರಭು, ಕಲ್ಲೇಶ್, ಸಿದ್ದೇಶ್, ಇಸಿಓ ದಾಸನಾಯ್ಕ, ಕೊಟ್ರೇಶ್, ಆರೋಗ್ಯಾಧಿಕಾರಿ ಎಸ್.ಎನ್. ರಾಜು, ರಾಘವೇಂದ್ರ, ರಮೇಶ್ ಇನ್ನಿತರರಿದ್ದರು.