ಜನಪರ ಯೋಚನೆಗಳಿಗೆ ತಕ್ಕ ಹೊಸ ಪಕ್ಷ ಜನ್ಮ ತಾಳಲಿ

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ ಕಮ್ಮರಡಿ ಅಭಿಮತ

ದಾವಣಗೆರೆ, ಸೆ.3 – ಬಡತನ, ನಿರುದ್ಯೋಗ, ಭ್ರಷ್ಟಾಚಾರ ದೇಶದಲ್ಲಿ ಕಾಡುತ್ತಿದ್ದು, ಜನರ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ. ಇವುಗಳಿಗೆ ಪರಿಹಾರ ಸಿಗಬೇಕಿದ್ದರೆ ಪ್ರಸ್ತುತ ಹೊಸ ರಾಜಕೀಯ ಪಕ್ಷ ಜನ್ಮ ತಾಳಬೇಕಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್‌ ಕಮ್ಮರಡಿ ತಿಳಿಸಿದರು. 

ಇಂದಿಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿ ಪರ ಚಿಂತಕರ ಸಭೆಯಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ರಾಜಕೀಯದಲ್ಲಿ ಬದಲಾವಣೆ ಅಗತ್ಯ ವಾಗಿದ್ದು, ಯಾವ ರೀತಿಯ ಬದಲಾವಣೆ ಬೇಕಿದೆ ಎಂದು ಚಿಂತಿಸುವ ಅಗತ್ಯವಿದೆ. ಜನಪರ ಚಿಂತನೆಗಳು, ಯೋಚನೆಗಳಿಗೆ ತಕ್ಕಂತಹ ಹೊಸ ರಾಜಕೀಯ ಪಕ್ಷ ಉದಯಿ ಸುವಂತಾಗಬೇಕು ಎಂದು ಹೇಳಿದರು.

ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ 1 ವರ್ಷದಿಂದ ದೆಹಲಿಯಲ್ಲಿ ರೈತರು ಚಳವಳಿ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಪ್ರಧಾನಿಗಳು ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಈ ಹೋರಾಟದ ಚರ್ಚೆ ನಡೆಯುತ್ತಿದ್ದರೂ ಪರಿಣಾಮ ಮಾತ್ರ ಶೂನ್ಯವಾಗಿದೆ. ಯೋಗ್ಯತೆ ಇಲ್ಲದವರು ಆಡಳಿತ ನಡೆಸುತ್ತಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರಗತಿಪರ ಹೋರಾಟಗಳು ಪರಿಣಾಮ ಬೀರುವುದಿಲ್ಲ. ನಮಗೆ ಯಾಕೆ ಜನರಿಂದ ಅಂತರ ಸೃಷ್ಟಿಯಾಗುತ್ತದೆ ಎಂಬು ದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆಗಳಲ್ಲಿ ಚಿಂತನೆಗಳಿಗಿಂತ ಜಾತಿ ಪ್ರಭಾವ ಹೆಚ್ಚಾಗಿರುತ್ತದೆ. ಜನರಿಗೆ ಆಗ ಸಂಘಟಕರಿಂದ ಮಠಾಧೀಶರು ನೆನಪಾಗುತ್ತಾರೆ. ಹಾಗಾಗಿ, ಯಾವುದೇ ಶಾಸಕರ ಸಂಪರ್ಕ ಇಲ್ಲದ ಹೊರತು ಕೆಲಸಗಳು ನಡೆಯುವುದಿಲ್ಲ ಎಂಬಂತಾಗಿದೆ ಎಂದರು. 

ಪ್ರಗತಿಪರ ಚಿಂತಕರೂ ಆದ ಉಪನ್ಯಾಸಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಈಗಿನ ರಾಜಕೀಯ ಸ್ಥಿತಿಯಲ್ಲಿ ನಮ್ಮ ಹಕ್ಕನ್ನು ಪ್ರತಿಪಾದಿಸಿದರೆ, ಸಮ ಸಮಾಜದ ಪರವಾಗಿ ಮಾತನಾಡಿದರೂ ಸಹ ದೇಶದ್ರೋಹ ಎಂಬಂತಾಗುತ್ತಿದೆ. ಇಂದಿನ ಆಡಳಿತ ಪಕ್ಷಗಳು ಇಡೀ ವ್ಯವಸ್ಥೆಯನ್ನು ಕಪಿಮುಷ್ಠಿಯಲ್ಲಿಟ್ಟು ಕೊಂಡು, ಪುರಾಣ ಪುರುಷರನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸುತ್ತಿವೆ. ಇದರಿಂದಾಗಿ ಎಲ್ಲಾ ಹೋರಾಟಗಳು ನಿಷ್ಕ್ರಿಯಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಕಡಕೋಳ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ರೀನಿವಾಸ್, ರಾಘು ದೊಡ್ಡಮನಿ, ಇಮ್ತಿಯಾಜ್ ಹುಸೇನ್, ಕೊಟ್ರಪ್ಪ, ಮಹಬೂಬ್ ಪಾಷಾ, ರೂಪಾ ನಾಯ್ಕ್ ಸೇರಿದಂತೆ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!