ದಾವಣಗೆರೆ, ಸೆ.3- ನಗರದ ಶಿವ ಸಹಕಾರಿ ಬ್ಯಾಂಕ್ ತನ್ನ ಸದಸ್ಯ ಗ್ರಾಹಕರು ಕೊರೊನಾ ಸಂದರ್ಭದಲ್ಲಿ 1 ಮತ್ತು 2ನೇ ಅಲೆಗಳಿಂದ ಸಂಕಷ್ಟಕ್ಕೊ ಳಗಾಗಿರುವುದನ್ನು ಮನಗಂಡು ಅವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಾಲಿ ಎನ್.ಪಿ.ಎ ಸಾಲಗಳ ಸಾಲಗಾರ ಸದಸ್ಯರು 2 ತಿಂಗಳೊಳಗಾಗಿ ಎನ್.ಪಿ.ಎ ಸಾಲ ಗಳನ್ನು ಮರುಪಾವತಿ ಮಾಡಿದಲ್ಲಿ ಅಂತಹ ಸಾಲಗಳ ಪೆನಲ್ ಬಡ್ಡಿಗೆ ರಿಯಾಯಿತಿ ನೀಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಬಿ.ಸಂಗಮೇಶ್ವರ ಗೌಡರು, ಉಪಾಧ್ಯಕ್ಷ ಐಗೂರು ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ಅಲ್ಲದೇ, ಪ್ರತಿ ತಿಂಗಳು ಸಾಲಗಾರ ಸದಸ್ಯರು ಸಾಲದ ಕಂತು ಮತ್ತು ಬಡ್ಡಿಯನ್ನು ತಿಂಗಳ ಕೊನೆಗೆ ಪಾವತಿಸಬೇಕಾಗಿರುವುದನ್ನು ಮುಂದಿನ ತಿಂಗಳ 10ನೇ ದಿನಾಂಕಗಳವರೆಗೂ ಸಮಯಾವಕಾಶ ನೀಡಿ, ಹಾಲಿ ವಿಧಿಸುತ್ತಿದ್ದ ಓವರ್ ಡ್ಯೂ ಬಡ್ಡಿಯಲ್ಲಿ ಶೇ.2 ರಷ್ಟು ರಿಯಾಯಿತಿಯನ್ನು 3 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸದಸ್ಯರಿಗೆ ವಾಸದ ಮನೆಯನ್ನು ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಟ್ಟಡ ಸಾಲಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿ, ತಿಂಗಳ ಸಮಾನ ಕಂತು ಬಡ್ಡಿ ದರ ಇಎಂಐ ಶೇ.8 ಮತ್ತು ಸಾಮಾನ್ಯ ಕಟ್ಟಡ ಸಾಲ ಬಡ್ಡಿ ದರ (ನಾನ್ ಇಎಂಐ ಸ್ಕೀಂ) ಶೇ.9 ರಂತೆ ಕಡಿಮೆ ಮಾಡಲಾಗಿದೆ ಎಂದು ಸಂಗಮೇಶ್ವರ ಗೌಡರು ಹಾಗೂ ಚಂದ್ರಶೇಖರ್ ಅವರುಗಳು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ವಿವರಿಸಿದರು.
ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರುಗಳಾದ ದೊಗ್ಗಳ್ಳಿ ಎಂ.ಬಸವರಾಜ್, ಬಿ.ಎಸ್.ಪ್ರಕಾಶ್, ಡಿ.ಹೆಚ್.ಪ್ರಭು, ಕೆ.ಪಿ.ಪ್ರದೀಪ್, ಜಿ.ಸಿದ್ದಪ್ಪ, ಜಿ.ಪಿ.ವಾಗೀಶ್ ಬಾಬು, ಜೆ.ಎಸ್.ಸಿದ್ದಪ್ಪ, ಎನ್.ವಸಂತ್, ಶ್ರೀಮತಿ ಡಿ.ನಿರ್ಮಲ, ಈ.ಚಂದ್ರಣ್ಣ, ಎಸ್.ರಾಜಶೇಖರ್, ಎಂ.ಜಿ.ರಾಜಶೇಖರಯ್ಯ, ಎನ್.ಟಿ.ಮಂಜುನಾಥ್, ಬಿ.ಕುಬೇರಪ್ಪ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.