ದಾವಣಗೆರೆ, ಆ. 3 – ವ್ಯಕ್ತಿಗಳು ಇದ್ದಾಗ ಯಾತನೆ ನೀಡಿ, ಹೋದ ನಂತರ ಇಂದ್ರ ಚಂದ್ರ ಎಂದು ಹೊಗಳುವುದಕ್ಕಿಂತ ಕೆಟ್ಟ ಪರಂಪರೆ ಇನ್ನೊಂದಿಲ್ಲ ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ವೈದ್ಯ ಸಾಹಿತಿ ಡಾ. ಹೆಚ್. ಗಿರಿಜಮ್ಮ ವೃತ್ತಿ ಮತ್ತು ಬರಹ – ಒಂದು ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ತನು ಮನ ಧನದಿಂದ ನಾಡು, ನುಡಿ, ಭಾಷೆ ಹಾಗೂ ಜನಾಂಗದ ಸೇವೆ ಮಾಡಿದ ಡಾ. ಹೆಚ್. ಗಿರಿಜಮ್ಮ ಅಂತವರನ್ನು ಜನರು ಮರೆಯುವುದನ್ನು ನೋಡಿದಾಗ ಸಾರ್ವಜನಿಕರ ಸ್ಮರಣ ಶಕ್ತಿ ಕಡಿಮೆ ಎಂಬುದು ಗೊತ್ತಾಗುತ್ತದೆ ಎಂದು ಶ್ರೀಗಳು ವಿಷಾದಿಸಿದರು.
ಗಿರಿಜಮ್ಮ ಅವರು ವೈದ್ಯರಾಗಿ, ಸಾಹಿತಿಯಾಗಿ ಹಾಗೂ ಒಳ್ಳೆಯ ಭಾಷಣಕಾರರಾಗಿ ಕೆಲಸ ಮಾಡಿ ದರು. ಆದರೆ, ಅವರ ಜಾತಿ ಹಾಗೂ ಬಣ್ಣವನ್ನು ಮುಂದಿಟ್ಟುಕೊಂಡು ಮಾನಸಿಕ ವೇದನೆಗೆ ಗುರಿ ಮಾಡಲಾಗಿತ್ತು ಎಂದು ಶ್ರೀಗಳು ಸಮಾಜದ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
§ಹೈಬ್ರಿಡ್ ಸಾಹಿತಿ’ಗಳಿಂದ ಮಾನಸಿಕ ಅನೈತಿಕತೆ: ಕುರ್ಕಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ತಮ್ಮ ಅವಧಿಯಲ್ಲಿ ವೈದ್ಯ ಸಾಹಿತಿ ಡಾ. ಹೆಚ್.ಗಿರಿಜಮ್ಮ ಅವರನ್ನು ಗುರುತಿಸಿರಲಿಲ್ಲ ಎಂದು ಕೆಲ §ಹೈಬ್ರಿಡ್ ಸಾಹಿತಿ’ಗಳು ವಾಟ್ಸಾಪ್ ಮೂಲಕ ಅಪಪ್ರಚಾರ ಮಾಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಂಜುನಾಥ ಕುರ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಿರಿಜಮ್ಮ ಅವರನ್ನು ಹಿಂದಿನ ಅವಧಿಯಲ್ಲಿ ಗುರುತಿಸಿರಲಿಲ್ಲ. ತಮ್ಮ ಅವಧಿಯ ಮೊದಲ ವರ್ಷದಲ್ಲೇ ಅವರಿಗೆ ಮಹಲಿಂಗರಂಗ ಪ್ರಶಸ್ತಿ ನೀಡಲಾಗಿತ್ತು. ಮೂರು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ತಮ್ಮನ್ನು ಗಿರಿಜಮ್ಮ ಮಗನಂತೆ ಕಾಣುತ್ತಿದ್ದರು ಎಂದು ಹೇಳಿದರು.
ಟೀಕೆ ವಿವೇಕದಿಂದ ಹಾಗೂ ಆತ್ಮ ವಿಮರ್ಶೆಯಿಂದ ಬರಬೇಕು. ಅದಿಲ್ಲದೇ ಆಷಾಢಭೂತಿ ವರ್ತನೆ ತೋರುವುದು ಮಾನಸಿಕ ಅನೈತಿಕತೆಯಂತೆ ಎಂದವರು ಕಟುವಾಗಿ ಹೇಳಿದರು.
ತಮ್ಮ ಅವಧಿ ಇಂದಿಗೆ ಮುಕ್ತಾಯವಾಗ ಲಿರುವ ಹಿನ್ನೆಲೆಯಲ್ಲಿ, ಈ ಅವಧಿಯಲ್ಲಿ ನಡೆದ ಕಾರ್ಯಕ್ರಮದ ಆತ್ಮಾವಲೋಕನ ಮಾಡಿಕೊಂಡ ಕುರ್ಕಿ, ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ ಹಾಗೂ ಮುಂದಿನ ಪರಿಷತ್ ಚುನಾವಣೆಗಾಗಿ ಬೇಕಾದವರನ್ನು ಕರೆಯ ಅಕಾರಣ ಆರೋಪ ಮಾಡಲಾಗಿತ್ತು. ಸಾರ್ವ ಜನಿಕರಿಂದ ಯಾವುದೇ ಹಣ ಪಡೆದಿಲ್ಲ ಎಂದು ತಿಳಿಸಿದರು.
ನಂತರ ಈ ಬಗ್ಗೆ ಮಾತನಾಡಿದ ಸಾಣೇಹಳ್ಳಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಸೂಯೆಯ ಸಾಹಿತಿ ಆಗದೇ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ಗುಣ ಹೊಂದಬೇಕು ಎಂದರು.
ಸಮಾಜದವರಿಂದ ಈ ರೀತಿಯ ತೊಂದ ರೆಗಳು ಎದುರಾದಾಗ ಖಿನ್ನತೆಗೆ ಒಳಗಾಗ ಬಾರದು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಇನ್ನಷ್ಟು ಗಟ್ಟಿಯಾಗಬೇಕು. ಗಿರಿಜಮ್ಮನವರ ಜೀವನ ನಮಗೊಂದು ಪಾಠ ಆಗಬೇಕು ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಲೇಖಕರಾದ ಡಾ. ವಸುಂಧರ ಭೂಪತಿ ಮಾತನಾಡಿ, ಬೆಂಗಳೂರಿನಲ್ಲಿ ನಾವು §ಗಿರಿಜಮ್ಮ ಸ್ನೇಹ ಬಳಗ’ ಸ್ಥಾಪಿಸಿದ್ದೇವೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಯುವ ಪೀಳಿಗೆಗೆ ಅವರ ಕೃತಿಗಳು ದೊರೆಯುವಂತಾಗಲು, ಪುಸ್ತಕಗಳ ಮರು ಮುದ್ರಣವಾಗಬೇಕು ಎಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಮಾತನಾಡಿ, ಬಡ ರೋಗಿಗಳಿಗೆ ಆರ್ಥಿಕ ಸಹಾಯ ಮಾಡಿದ್ದ ಗಿರಿಜಮ್ಮ, ಬಡ ಹುಡುಗಿಯೊಬ್ಬರನ್ನು ಸಾಕಿ ವೈದ್ಯರನ್ನಾಗಿ ಮಾಡಿದ್ದರು. ಅವರು ಮಾನವೀಯ ಮೌಲ್ಯದ ಪ್ರತೀಕವಾಗಿದ್ದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ತಮ್ಮ ಅವಧಿಯಲ್ಲಿ 2016ರಲ್ಲಿ ಗಿರಿಜಮ್ಮ ಅವರಿಗೆ ಜಿಲ್ಲಾ ಕಸಾಪ ವತಿಯಿಂದ ಮಹಲಿಂಗರಂಗ ಪ್ರಶಸ್ತಿ ನೀಡಲಾಗಿತ್ತು. 2017ರಲ್ಲಿ ಜಿಲ್ಲಾ ಕ.ಸಾ.ಪ. ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಂತರ ಅವರ ಮೂಲಕ ಜಿಲ್ಲೆಯ ಶ್ರೇಷ್ಠ ಸಾಧಕಿ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು ಎಂದರು.
ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಹಿರಿಯ ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿದರು.
ವೇದಿಕೆಯ ಮೇಲೆ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಕದಳಿ ವನಿತಾ ಸಮಾಜದ ಅಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ದಾವಣಗೆರೆ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ. ವಾಮದೇವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಹೊನ್ನಾಳಿ ಕ.ಸಾ.ಪ. ಅಧ್ಯಕ್ಷ ರೇವಣಪ್ಪ, ಜಗಳೂರು ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಹಜರತ್ ಅಲಿ, ಜಿಲ್ಲಾ ಕಸಾಪ ಗೌರವಾಧ್ಯಕ್ಷ ಬುರುಡೇಕಟ್ಟೆ ಮಂಜಪ್ಪ, ಕಸಾಪ ಕಾರ್ಯಾಲಯದ ಕಾರ್ಯದರ್ಶಿ ಜಿ.ಆರ್. ಷಣ್ಮುಖಪ್ಪ, ಗೌರವ ಕಾರ್ಯದರ್ಶಿಗಳಾದ ಎನ್.ಎಸ್. ರಾಜು, ಬಿ. ದಿಳ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.