ಕೆಲವೇ ದಿನಗಳಲ್ಲಿ ಶೇ.100ರಷ್ಟು ಜನಕ್ಕೆ ಲಸಿಕೆ

ಹರಿಹರದ ಬಡಾವಣೆಗಳಲ್ಲಿ ಖುದ್ದು ತೆರಳಿ ಲಸಿಕಾ ಅಭಿಯಾನ ನಡೆಸಿದ ಜಿಲ್ಲಾಧಿಕಾರಿ

ಹರಿಹರ, ನ. 30 – ಜಿಲ್ಲೆಯಲ್ಲಿ ಮೊದಲ ಡೋಸ್‌ ಕೊರೊನಾ ಲಸಿಕೆಯಲ್ಲಿ ಶೇ. 78 ರಷ್ಟು ಪ್ರಗತಿಯನ್ನು ಸಾಧಿಸಲಾಗಿದ್ದು, ಕೆಲವೇ ದಿನಗಳಲ್ಲಿ ಶೇ.100ರ ಗುರಿ ಮುಟ್ಟಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ನಗರದ ಬೆಂಕಿನಗರ ಮತ್ತು ಹಳ್ಳದಕೇರಿ ಬಡಾವಣೆಯಲ್ಲಿ ಕೆಲವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರದೇ ಇದ್ದ ಕಾರಣ, ಜಿಲ್ಲಾಧಿಕಾರಿ ತಾವೇ ಸ್ಥಳಕ್ಕೆ ಆಗಮಿಸಿ ಲಸಿಕೆಗಾಗಿ ಮನವೊಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು 12.23 ಲಕ್ಷ ಜನರಿಗೆ ಲಸಿಕೆ ಗುರಿ ಇದೆ. ಈಗಾಗಲೇ 10.83 ಲಕ್ಷ ಜನರಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದೆ, ಇದು ಶೇ.78ರಷ್ಟಾಗಿದೆ. 6.42 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಇದು ಶೇ.52ರಷ್ಟಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ನಗರಕ್ಕೆ ಆಗಮಿಸಿದಾಗ ಲಸಿಕೆಯಲ್ಲಿ ಶೇ.100ರ ಗುರಿಗೆ ಸೂಚಿಸಿದ್ದಾರೆ. ನಿನ್ನೆ  ಸುಮಾರು 60 ಸಾವಿರ ಜನರಿಗೆ ಲಸಿಕೆಯನ್ನು ಹಾಕಲಾಗಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ಶೇ. 100 ರಷ್ಟು ಗುರಿಯನ್ನು ತಲುಪಲಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಹರಿಹರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ  ಸಂಪೂರ್ಣ ಮುಗಿಯುವ ಹಂತದಲ್ಲಿ ಇದ್ದರೂ ಸಹ ನಗರದಲ್ಲಿ ಇನ್ನೂ 20 ಸಾವಿರ ಜನರು ಲಸಿಕೆ ಹಾಕಿಸಿಕೊಂಡಿಲ್ಲ. ಸಾರ್ವಜನಿಕರು ತಪ್ಪು ಕಲ್ಪನೆ ಬಿಟ್ಟು ಲಸಿಕೆ ಪಡೆದರೆ ಸಾವಿನ ದವಡೆಯಿಂದ ಪಾರಾಗಬಹುದು ಎಂದವರು ಹೇಳಿದರು.

ಕೊರೊನಾ ತಡೆಗಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಿವರಿಸಿದ ಅವರು, ಜಿಲ್ಲೆಗೆ ಕೇರಳ ಮತ್ತು ಇತರೆ ರಾಜ್ಯದಿಂದ ಬರುವವರಿಗೆ ತಪಾಸಣೆ ಮಾಡಲಾಗುತ್ತಿದೆ. ಕಾಲೇಜು ಮತ್ತು  ಇತರೆ ಕಡೆಗಳಲ್ಲಿ ಸಭೆ, ಸಮಾರಂಭಗಳು ನಡೆಯದಂತೆ ನಿರ್ಬಂಧಗಳನ್ನು ಹಾಕಲಾಗಿದೆ. ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸುವುದನ್ನು ಹಾಗೂ ಅಂತರ ಕಾಪಾಡಿಕೊಂಡು ಓಡಾಡುವುದನ್ನು ಬಿಟ್ಟಿದ್ದಾರೆ ಮುಂದಿನ ದಿನಗಳಲ್ಲಿ ಯಾರು ಮಾಸ್ಕ್ ಧರಿಸದೆ ಓಡಾಡುತ್ತಾರೋ ಅವರಿಗೆ ದಂಡ ವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕಿ ಜಿ.ನಜ್ಮಾ, ಜಿಲ್ಲಾ ಆರೋಗ್ಯ ನೂಡಲ್ ಅಧಿಕಾರಿ ನಟರಾಜ್, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್ ಲಕ್ಷ್ಮಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ ಚಂದ್ರಮೋಹನ್, ತಾ.ಪಂ. ಇ.ಓ. ಗಂಗಾಧರನ್‌, ಪ್ರೊಬೇಷನರಿ ಡಿವೈಎಸ್ಪಿ ಭೂತೆ ಗೌಡ್ರು, ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ಜಿಲ್ಲಾಧಿಕಾರಿ ಆಪ್ತಸಹಾಯಕ ಮರುಳಸಿದ್ದಪ್ಪ, ನಗರಸಭೆ ಎಇಇ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!