ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಸೋಮವಾರ ದಾವಣಗೆರೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ಎಸ್ಸೆಸ್ ಹಾಗೂ ಕುಟುಂಬ ವರ್ಗದವರವನ್ನು ಭೇಟಿ ಮಾಡಿದರು.
ಕೊರೊನಾ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸಿಎಂ ಬೊಮ್ಮಾಯಿ ಕರೆ
ದಾವಣಗೆರೆ, ನ. 29 – ಕೊರೊನಾ ರೂಪಾಂತರಿ ಯಾದ ಓಮಿಕ್ರಾನ್ ಬಗ್ಗೆ ಜನತೆ ಗಾಬರಿಯಾಗಬೇಕಿಲ್ಲ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಬೊಮ್ಮಾಯಿ, ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಶಾಲಾ-ಕಾಲೇಜುಗಳನ್ನು ಮುಚ್ಚಲು ತಿಳಿಸಿಲ್ಲ. ಕೋವಿಡ್ ರೂಪಾಂತರಿ ವೈರಸ್ ಓಮಿಕ್ರಾನ್ ಬಗ್ಗೆ ಜನತೆ ಭಯಪಡದೇ, ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ರೂಪಾಂತರಿ ವೈರಸ್ ಓಮಿಕ್ರಾನ್ ಕಂಡು ಬಂದ ದೇಶಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದೆ. ಅಂತಹವರ ಸಂಪರ್ಕಿತರನ್ನು ಪತ್ತೆ ಮಾಡಿ, ಪರೀಕ್ಷಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲೂ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಲಾಗುತ್ತಿದೆ. ನೆಗೆಟಿವ್ ವರದಿ ಇದ್ದರೂ, ಮತ್ತೊಮ್ಮೆ ತಪಾಸಣೆ ಮಾಡಿ, ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಅಗತ್ಯ ಬಿದ್ದರೆ ಅಂತಹವರ ಕ್ವಾರಂಟೈನ್‍ಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ವಿಭಿನ್ನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆಂದು ಐಸಿಎಆರ್‌ಗೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಯಾವ ರೂಪಾಂತರಿ ಎಂಬುದು ಸ್ಪಷ್ಟವಾಗಲಿದೆ ಎಂದವರು ಹೇಳಿದರು. ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಕೇರಳದಿಂದ ಬಂದ ವಿದ್ಯಾರ್ಥಿಗಳು, ಆ ರಾಜ್ಯದಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಬಂದ 7 ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ. ಜನರು ಹೆಚ್ಚು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಸರ್ಕಾರ ನಿರಂತರವಾಗಿ ತಜ್ಞರು, ಕೇಂದ್ರ ಸರ್ಕಾರದ ಸಂಪರ್ಕದಲ್ಲಿದೆ. ಕಾಲ ಕಾಲಕ್ಕೆ ಕೇಂದ್ರ ಸರ್ಕಾರವು ನೀಡುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.