ನಗರದಲ್ಲಿನ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ
ದಾವಣಗೆರೆ, ನ. 29 – ಇಡೀ ದೇಶದಲ್ಲಿ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ನ ಕೈಬೆರಳೆಣಿಕೆಯಷ್ಟು ಸಂಸದರು ಉಳಿದಿದ್ದಾರೆ. ತಿರಸ್ಕೃತಗೊಂಡಿರುವ ಕಾಂಗ್ರೆಸ್‌ಗೆ ಮತ್ತೆ ಅವಕಾಶ ಸಿಗದಂತೆ ಬಿಜೆಪಿ ಬಲಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದ ಅಪೂರ್ವ ಹೋಟೆಲ್‌ನಲ್ಲಿ ಮಾಯಕೊಂಡ ಕ್ಷೇತ್ರದ ಪರಿಷತ್ ಮತದಾರರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಶಿವಮೊಗ್ಗ – ದಾವಣಗೆರೆ ಪರಿಷತ್ ಕ್ಷೇತ್ರದ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲ್ಲಲು ಪೂರಕ ವಾತಾವರಣ ಇದೆ. ಮೊದಲ ಸುತ್ತಿನಲ್ಲಿ – ಮೊದಲ ಪ್ರಾಶಸ್ತ್ಯದ ಮತಗಳಿಂದ ಅವರು ಗೆಲ್ಲುವಂತೆ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಪರಿಷತ್‌ನ 25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಅರುಣ್ ಸೇರಿ 15 ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಸ್ಪಷ್ಟವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಹಣ – ಹೆಂಡದ ಆಮಿಷ ಒಡ್ಡಿ ಕಾಂಗ್ರೆಸ್ ಗೆಲ್ಲುವ ಕಾಲ ಮುಗಿದಿದೆ. ಕೇಂದ್ರದಲ್ಲಿ ಮುಂದಿನ 20-25 ವರ್ಷಗಳ ಕಾಲ ನರೇಂದ್ರ ಮೋದಿ – ಬಿಜೆಪಿ ಸರ್ಕಾರ ಇರುವುದು ಸ್ಪಷ್ಟವಾಗಿದೆ ಎಂದವರು ತಿಳಿಸಿದರು.
ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲು ನಾನು ರಾಜೀನಾಮೆ ನೀಡಿದ ನಂತರ, ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಪಕ್ಷ ಬಲಪಡಿಸುತ್ತಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಪರಿಷತ್ ಚುನಾವಣೆಯ ಅಭ್ಯರ್ಥಿ ಡಿ.ಎಸ್. ಅರುಣ್ ಮಾತನಾಡಿ, ಯಡಿಯೂರಪ್ಪನವರ ಕಾಲದಲ್ಲಿ ಪಂಚಾಯ್ತಿ ಸದಸ್ಯರಿಗೆ ನಿಗದಿಪಡಿಸಲಾಗಿದ್ದ ಗೌರವ ಧನ ಹೆಚ್ಚಿಸಬೇಕು ಎಂಬುದು ತಮ್ಮ ಉದ್ದೇಶವಾಗಿದೆ ಎಂದರು.
ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ ಸುಧಾರಿಸಬೇಕು, ಪಂಚಾಯ್ತಿಗಳಲ್ಲೇ ಜನನ – ಮರಣ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಮುಂತಾದವು ಸಿಗುವಂತಾಗಬೇಕು. ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ರಾಮರಾಜ್ಯ ಹಾಗೂ ನಗರಗಳ ಪ್ರಗತಿ ಸಾಧ್ಯ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕಿದೆ. ಯಡಿಯೂರಪ್ಪನವರು ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದರು, ಗ್ರಾಮ ಪಂಚಾಯ್ತಿಗಳ ಸದಸ್ಯರಿಗೆ ಗೌರವ ಧನ ನಿಗದಿ ಪಡಿಸಿದ್ದರು ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಬಿಜೆಪಿ ಹಿರಿಯ ನಾಯಕ ಡಿ.ಎಸ್. ಶಂಕರಮೂರ್ತಿ ಅವರು ಜನ ಸಂಘದ ಕಾಲದಿಂದಲೂ ಪಕ್ಷವನ್ನು ಕಟ್ಟುವಲ್ಲಿ ತೊಡಗಿದ್ದಾರೆ. ತಾವು ಸಚಿವರಾಗಿದ್ದ ಸಮಯದಲ್ಲೂ ಅವರು ಸದನದಲ್ಲಿ ಕಾರ್ಯ ನಿರ್ವಹಣೆ ಕುರಿತು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದರು. ಅವರ ಪುತ್ರ ಡಿ.ಎಸ್. ಅರುಣ್ ಸಹ ತಂದೆಯಂತೆಯೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ಮಾಯಕೊಂಡದ ಶಾಸಕ ಪ್ರೊ. ಲಿಂಗಣ್ಣ, ಮಾಜಿ ಶಾಸಕ ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಬಯಲು ಸೀಮೆ ಪ್ರಾಧಿಕಾರದ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಮುಖಂಡರಾದ ಬಿ.ಎಸ್.ಜಗದೀಶ್, ಮಂಜಾನಾಯ್ಕ, ಶ್ರೀನಿವಾಸ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.